ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಡ್ರಗ್ಸ್ ಹಾವಳಿ ಯುವ ಜನತೆಯನ್ನು ತಪ್ಪುದಾರಿಗೆ ಎಳೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ಹಾವಳಿ ಹೆಚ್ಚುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.
- ಪೊಲೀಸ್ ವ್ಯವಸ್ಥೆಯನ್ನು ಠಾಣಾ ಹಂತದಲ್ಲಿ ಮತ್ತಷ್ಟು ಬಲಪಡಿಸಲು, ಎಲ್ಲಾ ಹಂತಗಳಲ್ಲಿ ಜನಸ್ನೇಹಿ ಆಡಳಿತ ನಡೆಸಲು ಆದ್ಯತೆ ನೀಡಲಾಗುವುದು. ಸಂಘಟಿತ ಅಪರಾಧ ಮಟ್ಟ ಹಾಕುವ ಬಗ್ಗೆ ಈ ಹಿಂದಿನ ಆಯುಕ್ತರ ಮಾದರಿಯಲ್ಲೇ ಕ್ರಮವಹಿಸಲಾಗುವುದು. ರೌಡಿ ಚಟುವಟಿಕೆಯನ್ನು ಹತ್ತಿಕ್ಕಲು ಎಲ್ಲ ರೀತಿ ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಅವರು ಟ್ವೀಟ್ ಮಾಡಿದ್ದಾರೆ.ಈ ಹಿಂದ ಇದ್ದ ಪೊಲೀಸ್ ಅಯುಕ್ತ ಸಂದೀಪ್ ಪಾಟೀಲ್ ಅವರು ಖಡಕ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಅಕ್ರಮ ಗೋಸಾಗಾಣಿಕೆ, ಗಾಂಜಾ ಮಾರಾಟಗಾರರಿಗೆ ಕಡಿವಾಣ ಹಾಕಿದ್ದರು. ರೌಡಿಶೀಟರ್‌ಗಳಲ್ಲಿ ಭಯ ಹುಟ್ಟಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ನಿಗಾವಹಿಸಿ ಸಾರ್ವಜನಿಕರ ದೂರು ದುಮ್ಮಾನಗಳನ್ನು ಆಲಿಸಿ, ಅದಕ್ಕೆ ತಕ್ಕಂತೆ ಕಾನೂನು ರೀತಿಯ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದ್ದರು. ಇದರ ಜೊತೆಗೆ ಪೊಲೀಸ್ ಫೋನ್ ಇನ್ ಕಾರ್ಯಕ್ರಮದ ಮೂಲಕವೂ ಜನಪ್ರಿಯರಾಗಿದ್ದರು. ಹೀಗಾಗಿ ನೂತನ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಇದೇ ರೀತಿಯಾಗಿ ಕಾರ್ಯ ನಿರ್ವಹಿಸಲಿ ಎಂದು ಮಂಗಳೂರು ಜನತೆ ಬಯಸುತ್ತಿದ್ದಾರೆ