ಬೆಂಗಳೂರು: ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಸಂಸ್ಥೆ, ಮಂಗಳವಾರ ಬೆಳಿಗ್ಗೆ ರಾಜ್ಯದ ವಿವಿಧೆಡೆ ಏಕಕಾಲಿಕ ದಾಳಿ ನಡೆಸಿದೆ. ಬೆಂಗಳೂರು, ಚಿಕ್ಕಬಳ್ಳಾಪುರ, ಕೊಡಗು, ಹಾಸನ ಮತ್ತು ಚಿತ್ರದುರ್ಗ ಸೇರಿದಂತೆ ಐದು ಜಿಲ್ಲೆಗಳ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಮತ್ತು ಆಸ್ತಿಗಳ ಮೇಲೆ ತನಿಖಾ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನಿಯರ್ ಎಂ. ಆಂಜನೇಯಮೂರ್ತಿ ಅವರ ನಿವಾಸ ಹಾಗೂ ಸಂಬಂಧಿಕರ ಮನೆಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯಲಹಂಕದ ಮನೆ, ಜಕ್ಕೂರು ಕಾಂಪ್ಲೆಕ್ಸ್, ತುಮಕೂರು, ಮಧುಗಿರಿ ಹಾಗೂ ಗೌರಿಬಿದನೂರಿನ ಕಚೇರಿಗಳಲ್ಲೂ ದಾಳಿ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ಟಿಹೆಚ್‌ಒ ಡಾ. ವೆಂಕಟೇಶ್ ಅವರ ಯರಗುಂಟೇಶ್ವರ ಬಡಾವಣೆಯ ಮನೆ, ಆದಿವಾಲ ಗ್ರಾಮದ ನಿವಾಸ ಮತ್ತು ಕ್ಲಿನಿಕ್‌ಗಳಲ್ಲಿ ದಾಳಿ ನಡೆದಿದೆ.
ಹಾಸನ ಜಿಲ್ಲೆ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಓಂ ಪ್ರಕಾಶ್ ಹಾಗೂ ಕಂದಾಯ ಇಲಾಖೆ ಅಧಿಕಾರಿಯಾಗಿರುವ ಎನ್. ವೆಂಕಟೇಶ್ ಅವರ ಮನೆಗಳಲ್ಲಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದರು. ಹಾಸನ ನಗರದಲ್ಲಿರುವ ಚನ್ನಪಟ್ಟಣ ಹೌಸಿಂಗ್ ಬೋರ್ಡ್‌ನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯಪಾಲಕ ಇಂಜಿನಿಯರ್ ಜಯಣ್ಣ ಅವರ ಮನೆಯ ಮೇಲೂ ದಾಳಿ ನಡೆದಿದೆ.