ಬೆಂಗಳೂರು: ಭ್ರಷ್ಟರ ವಿಬೆನ್ನತ್ತಿರುವ ಲೋಕಾಯುಕ್ತ ಪೊಲೀಸರು ಗುರುವಾರ ಬೆಳ್ಳಂಬೆಳಿಗ್ಗೆ ಕಾರ್ಯಾಚರಣೆಯ ಅಖಾಡಕ್ಕೆ ಧುಮುಕಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ 7 ಜಿಲ್ಲೆಗಳಲ್ಲಿ ಲೋಕಾಯುಕ್ತ ಪೊಲೀಸರು ವಿವಿಧ ಇಲಾಖೆಗಳ ಅಧಿಕಾರಿಗಳ ಕಚೇರಿ ಹಾಗೂ ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ.
ಬೆಂಗಳೂರು, ತುಮಕೂರು, ಕೋಲಾರ, ದಾವಣಗೆರೆ, ಕಲಬುರಗಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಲೋಕಾಯುಕ್ತ ಪೊಲೀಸರ ವಿವಿಧ ತಂಡಗಳು ಅಧಿಕಾರಿಗಳ ನಿವಾಸ, ಕಚೇರಿಗಳಲ್ಲಿ ಶೋಧ ಕೈಗೊಂಡಿದೆ. ಬೆಂಗಳೂರಿನಲ್ಲಿ ಬಿಬಿಎಂಪಿಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಹೆಚ್.ಬಿ.ಕಲ್ಲೇಶಪ್ಪ ಡಿಪಿಎಆರ್ ಚೀಫ್ ಇಂಜಿನಿಯರ್ ಟಿ.ಡಿ.ನಂಜುಡಪ್ಪ ನಿವಾಸಗಳ ಮೇಲೆ ಶೋಧ ನಡೆದಿದೆ.
ಕೋಲಾರದಲ್ಲಿ ಬೆಸ್ಕಾಂ ಎಇಇ ಜಿ.ನಾಗರಾಜ್ ನಿವಾಸದ ಮೇಲೆ ಲೋಕಾಯುಕ್ತ ತಂಡ ದಾಳಿ ಕೈಗೊಂಡಿದೆ. ತುಮಕೂರಿನಲ್ಲಿ ಆರೋಗ್ಯ ಇಲಾಖೆಯ ಡಾ. ಜಗದೀಶ್ ನಿವಾಸದ ಮೇಲೆ, ದಾವಣಗೆರೆಯಲ್ಲಿ ಆಹಾರ ಇಲಾಖೆಯ ಅಧಿಕಾರಿ ಜಿ.ಎಸ್. ನಾಗರಾಜು ನಿವಾಸದ ಮೇಲೆ ದಾಳಿ ನಡೆದಿದೆ.
ಕಲಬುರಗಿಯಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿ ಜಗನ್ನಾಥ್ ನಿವಾಸದಲ್ಲೂ ಶೋಧ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.