ವಾಷಿಂಗ್ಟನ್: ಭಾರತ ಮತ್ತು ಅಮೆರಿಕ ನಡುವಿನ ಇತ್ತೀಚಿನ ವ್ಯಾಪಾರ ಒಪ್ಪಂದವು ಉಭಯ ರಾಷ್ಟ್ರಗಳ ಪಾಲುದಾರಿಕೆಯಲ್ಲಿ ಹೊಸ ಮತ್ತು ಮಹತ್ವದ ಹಂತಕ್ಕೆ ನಾಂದಿ ಹಾಡಿದೆ ಎಂದು ಅಮೆರಿಕಕ್ಕೆ ಭಾರತೀಯ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಹೇಳಿದ್ದಾರೆ.
ಸೋಮವಾರ ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ಅಂತಿಮಗೊಂಡ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮ Xನಲ್ಲಿ ಪ್ರತಿಕ್ರಿಯಿಸಿದ ಕ್ವಾತ್ರಾ, “ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಾಯಕತ್ವದಲ್ಲಿ ಈ ಒಪ್ಪಂದವು ಪರಿಣಾಮಕಾರಿ ಪಾಲುದಾರಿಕೆಗೆ ದೊಡ್ಡ ಗೆಲುವಾಗಿದೆ. ಇದು ಎರಡು ದೇಶಗಳ ಆರ್ಥಿಕತೆಗಳಿಗೆ ಮತ್ತು ಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ” ಎಂದು ಹೇಳಿದ್ದಾರೆ.
“ಇಂದಿನ ಘೋಷಣೆಗಳು ನಮ್ಮ ದ್ವಿಪಕ್ಷೀಯ ಸಹಕಾರದಲ್ಲಿ ಅತ್ಯಂತ ಆಕರ್ಷಕ ಹೊಸ ಹಂತವನ್ನು ಆರಂಭಿಸಿವೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದಕ್ಕೂ ಮೊದಲು, ಪ್ರಧಾನಿ ಮೋದಿ ಅವರೊಂದಿಗೆ ನಡೆದ ದೂರವಾಣಿ ಸಂಭಾಷಣೆಯ ಬಳಿಕ ಅಮೆರಿಕ ಅಧ್ಯಕ್ಷ ಟ್ರಂಪ್, ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ತಲುಪಿರುವುದನ್ನು ಘೋಷಿಸಿದ್ದರು. ಪ್ರಧಾನಿ ಮೋದಿ ಅವರನ್ನು “ನನ್ನ ಅತ್ಯುತ್ತಮ ಸ್ನೇಹಿತರಲ್ಲಿ ಒಬ್ಬರು” ಎಂದು ವರ್ಣಿಸಿದ ಟ್ರಂಪ್, ಈ ಒಪ್ಪಂದದ ಪ್ರಮುಖ ಅಂಶಗಳನ್ನು ವಿವರಿಸಿದ್ದಾರೆ.
ಟ್ರಂಪ್ ಅವರ ಪ್ರಕಾರ, ಭಾರತೀಯ ಸರಕುಗಳ ಮೇಲೆ ಅಮೆರಿಕ ವಿಧಿಸಿದ್ದ ಶೇ.25ರ ಪರಸ್ಪರ ಸುಂಕವನ್ನು ತಕ್ಷಣವೇ ಶೇ.18ಕ್ಕೆ ಇಳಿಸಲಾಗುತ್ತದೆ. ಇದನ್ನು ಅವರು ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳಲ್ಲಿ ಮಹತ್ವದ ತಿರುವು ಎಂದು ಕರೆಡಿದ್ದಾರೆ.
ವ್ಯಾಪಾರ, ರಷ್ಯಾ–ಉಕ್ರೇನ್ ಯುದ್ಧ ಹಾಗೂ ಇಂಧನ ಸಹಕಾರ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆದಿರುವುದಾಗಿ ಟ್ರಂಪ್ ತಿಳಿಸಿದರು. ರಷ್ಯಾದ ತೈಲ ಖರೀದಿಯನ್ನು ಕಡಿಮೆ ಮಾಡಿ ಅಮೆರಿಕ ಮತ್ತು ಇತರ ದೇಶಗಳಿಂದ ಇಂಧನ ಖರೀದಿಯನ್ನು ಹೆಚ್ಚಿಸುವ ಕುರಿತು ಭಾರತ ಸಮ್ಮತಿಸಿದೆ ಎಂಬುದನ್ನೂ ಅವರು ಉಲ್ಲೇಖಿಸಿದ್ದಾರೆ.
ಈ ವ್ಯಾಪಾರ ಒಪ್ಪಂದ ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಭಾರತವು ಅಮೆರಿಕ ವಿರುದ್ಧ ತನ್ನ ಸುಂಕ ಹಾಗೂ ಸುಂಕೇತರ ಅಡೆತಡೆಗಳನ್ನು ಶೂನ್ಯ ಮಟ್ಟಕ್ಕೆ ಇಳಿಸುವತ್ತ ಸಾಗಲಿದೆ ಎಂದು ಟ್ರಂಪ್ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಭಾರತವು ಅಮೆರಿಕದಿಂದ ಇಂಧನ, ತಂತ್ರಜ್ಞಾನ, ಕೃಷಿ ಉತ್ಪನ್ನಗಳು ಸೇರಿದಂತೆ ವಿವಿಧ ವಸ್ತುಗಳನ್ನು 500 ಬಿಲಿಯನ್ ಡಾಲರ್ಗಿಂತ ಹೆಚ್ಚು ಮೊತ್ತದಲ್ಲಿ ಖರೀದಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಭಾರತೀಯ ಉತ್ಪನ್ನಗಳ ಮೇಲಿನ ಸುಂಕವನ್ನು ಶೇ.18ಕ್ಕೆ ಇಳಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. “ಭಾರತದ 1.4 ಬಿಲಿಯನ್ ಜನರ ಪರವಾಗಿ ಅಧ್ಯಕ್ಷ ಟ್ರಂಪ್ ಅವರಿಗೆ ಧನ್ಯವಾದಗಳು” ಎಂದು ಅವರು ಹೇಳಿದ್ದಾರೆ.
ಎರಡು ದೊಡ್ಡ ಆರ್ಥಿಕತೆಗಳು ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವಗಳು ಒಟ್ಟಾಗಿ ಕೆಲಸ ಮಾಡಿದಾಗ, ಅದು ಜನರಿಗೆ ಪ್ರಯೋಜನವನ್ನು ತರುತ್ತದೆ ಹಾಗೂ ಪರಸ್ಪರ ಲಾಭದ ಸಹಕಾರಕ್ಕೆ ಅಪಾರ ಅವಕಾಶಗಳನ್ನು ತೆರೆದುಕೊಡುತ್ತದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ ಅಧ್ಯಕ್ಷ ಟ್ರಂಪ್ ನೀಡುತ್ತಿರುವ ನಾಯಕತ್ವವನ್ನು ಶ್ಲಾಘಿಸಿದ ಪ್ರಧಾನಿ, “ಭಾರತವು ಶಾಂತಿಗಾಗಿ ಅವರ ಪ್ರಯತ್ನಗಳನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಮ್ಮ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಅವರೊಂದಿಗೆ ನಿಕಟವಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ” ಎಂದು ಹೇಳಿದ್ದಾರೆ.
























































