ಮುಂಬೈ,: ಭಾರತೀಯ ಚಿತ್ರರಂಗದ ದಿಗ್ಗಜ ಗಾಯಕಿ ಆಶಾ ಭೋಸ್ಲೆ (Asha Bhosle) ಅವರು ಭಾನುವಾರ ನಿಧನ ಹೊಂದಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.
ಕಳೆದ ಕೆಲವು ದಿನಗಳಿಂದ ತೀವ್ರ ಉಸಿರಾಟದ ಸಮಸ್ಯೆ ಮತ್ತು ಎದೆನೋವಿನಿಂದ ಬಳಲುತ್ತಿದ್ದ ಅವರು ಮುಂಬೈನ Breach Candy Hospitalನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತೀವ್ರ ನಿಗಾ ಘಟಕದಲ್ಲಿ ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದರೂ, ಚಿಕಿತ್ಸೆಗೆ ಸ್ಪಂದಿಸದೆ ಮಧ್ಯಾಹ್ನದ ವೇಳೆಗೆ ಕೊನೆಯುಸಿರೆಳೆದರು.
ಆಶಾ ಭೋಸ್ಲೆ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಚಿತ್ರರಂಗದ ಗಣ್ಯರು ಹಾಗೂ ಸಂಗೀತ ಕ್ಷೇತ್ರದ ಅನೇಕರು ಅವರ ಶೀಘ್ರ ಚೇತರಿಕೆಗೆ ಪ್ರಾರ್ಥನೆ ಸಲ್ಲಿಸಿದ್ದರು. ಆದರೆ, ಆ ಪ್ರಾರ್ಥನೆ ಫಲಕಾರಿಯಾಗದೆ, ಸಂಗೀತ ಲೋಕವು ತನ್ನ ಅಮೂಲ್ಯ ಧ್ವನಿಯನ್ನು ಕಳೆದುಕೊಂಡಂತಾಗಿದೆ.
ಹಿಂದಿ ಸೇರಿದಂತೆ ಕನ್ನಡ, ತಮಿಳು, ತೆಲುಗು, ಮರಾಠಿ, ಮಲಯಾಳಂ, ಬೆಂಗಾಲಿ ಸೇರಿದಂತೆ ಅನೇಕ ಭಾಷೆಗಳಲ್ಲಿ ಲಕ್ಷಾಂತರ ಹಾಡುಗಳನ್ನು ಹಾಡಿರುವ ಆಶಾ ಭೋಸ್ಲೆ, ಭಾರತೀಯ ಸಂಗೀತಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ತಮ್ಮ ವಿಶಿಷ್ಟ ಧ್ವನಿ ಮತ್ತು ವೈವಿಧ್ಯಮಯ ಶೈಲಿಯಿಂದ ಅವರು ಹಲವು ಪೀಳಿಗೆಯ ಶ್ರೋತೃಗಳನ್ನು ಮೋಡಿ ಮಾಡಿದ್ದರು.
ಗಾಯನ ಕ್ಷೇತ್ರದಲ್ಲಿ ಅವರು ಎರಡು ರಾಷ್ಟ್ರ ಪ್ರಶಸ್ತಿಗಳು, ಫಿಲ್ಮ್ಫೇರ್ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದರು. ಅವರ ಹಾಡುಗಳು ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಗೂ ನಾಮಿನೇಟ್ ಆಗಿದ್ದವು. ‘ಏಷ್ಯಾ ನೈಟಿಂಗೇಲ್’ ಎಂಬ ಬಿರುದನ್ನು ಪಡೆದಿದ್ದ ಅವರು, ಸಂಗೀತ ಕ್ಷೇತ್ರದಲ್ಲಿ ಅಪಾರ ಗೌರವ ಪಡೆದಿದ್ದರು.
Lata Mangeshkar ಅವರ ಸಹೋದರಿಯಾಗಿದ್ದ ಆಶಾ ಭೋಸ್ಲೆ, ಕೇವಲ ಗಾಯಕಿಯಾಗಿಯೇ ಅಲ್ಲದೆ ಯಶಸ್ವಿ ಉದ್ಯಮಿಯಾಗಿಯೂ ಹೆಸರು ಮಾಡಿದ್ದರು. ‘Asha’s’ ಹೆಸರಿನ ರೆಸ್ಟೊರೆಂಟ್ ಸರಪಳಿಗಳನ್ನು ವಿದೇಶಗಳಲ್ಲಿಯೂ ಯಶಸ್ವಿಯಾಗಿ ನಡೆಸುತ್ತಿದ್ದರು. 90ನೇ ವಯಸ್ಸಿನವರೆಗೂ ಲೈವ್ ಶೋಗಳನ್ನು ನೀಡುತ್ತಿದ್ದ ಅವರು, ಜೀವನ್ಮುಖಿ ವ್ಯಕ್ತಿತ್ವದಿಂದ ಎಲ್ಲರ ಮನ ಗೆದ್ದಿದ್ದರು. ಅವರ ಅಗಲಿಕೆ ಭಾರತೀಯ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಹಿತ ಗಣ್ಯರು ಕಂಬನಿ ಮಿಡಿದಿದ್ದಾರೆ.























































