ಬೆಂಗಳೂರು, ಬೆಂಗಳೂರು ಮೆಟ್ರೋ 2 ನೇ ಹಂತವನ್ನು 2024 ರೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಶಿವಾಜಿನಗರ ಕ್ಷೇತ್ರದಲ್ಲಿ ಬಿಜೆಪಿಯ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಫ್ಲೈ ಓವರ್ ಗಳನ್ನು ನಿರ್ಮಿಸಲಾಗುತ್ತಿದೆ. ಬೃಹತ್ ಬೆಂಗಳೂರಿಗೆ ಅಭಿವೃದ್ಧಿ ಯೋಜನೆ ಮಾಡಲಾಗುತ್ತಿದೆ. ಮೆಟ್ರೋ 2 ನೇ ಹಂತವನ್ನು 2024 ರೊಳಗೆ ಮುಗಿಸಲು ತಿಳಿಸಲಾಗಿದೆ. ಮೆಟ್ರೋ 3ನೇ ಹಂತಕ್ಕೆ 26ಸಾವಿರ ಕೋಟಿ ರೂ. ಯೋಜನೆ ಕೇಂದ್ರದ ಅನುಮೋದನೆ ದೊರೆತ ತಕ್ಷಣ, ಕಾಮಗಾರಿ ಪ್ರಾರಂಭಿಸಲಾಗುವುದು. ಸಬ್ ಅರ್ಬನ್ ರೈಲು ಯೋಜನೆ 15 ಸಾವಿರ ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದ್ದು, ಪ್ರಧಾನಿಯವರು ಯೋಜನೆಗೆ ಅಡಿಗಲ್ಲು ಹಾಕಿದ್ದಾರೆ. ಸ್ಯಾಟಿಲೈಟ್ ಟೌನ್ ರಿಂಗ್ ರೋಡ್, ಬೆಂಗಳೂರು ಹೊರ ವಲಯದ ರಸ್ತೆಗಳ ಕೆಲಸ ಪ್ರಾರಂಭವಾಗಿದೆ. ಫೆರಿಫೆರಲ್ ರಿಂಗ್ ರಸ್ತೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕೆಲಸ ಕೈಗೊಳ್ಳಲಾಗುವುದು. ಕಾವೇರಿ 5 ನೇ ಹಂತದ ಕಾಮಗಾರಿಯನ್ನು ಪೂರ್ಣಗೊಳಿಸಲಾಗುತ್ತಿದೆ. ಬಹಳ ವರ್ಷದಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲ ಯೋಜನೆಗಳನ್ನು ಜನರ ಮುಂದೆ ಇಡಬೇಕು. ಭಾಜಪ ಕಾರ್ಯಕರ್ತರು ಹೆಮ್ಮೆಯಿಂದ ಜನರ ಬಳಿ ಹೋಗಬಹುದು ಎಂದರು.
*ಕಾಂಗ್ರೆಸ್ ನ್ನು ಜನರು ತಿರಸ್ಕರಿಸಿದ್ದಾರೆ:*
ಕಾಂಗ್ರೆಸ್ ನವರು ಮೊಸರಿನಲ್ಲಿ ಕಲ್ಲನ್ನು ಹುಡುಕುವ ಕೆಲಸವನ್ನು ಮಾಡುತ್ತಾರೆ.ಅವರು ಜನಕಲ್ಯಾಣ ಕಾರ್ಯಕ್ರಮಗಳನ್ನು ಮಾಡದಿರುವ ಕಾರಣ ಜನರು ಕಳೆದ ಬಾರಿ ತಿರಸ್ಕಾರ ಮಾಡಿದ್ದಾರೆ. ಈ ಬಾರಿಯೂ ಜನರು ಕಾಂಗ್ರೆಸ್ ನ್ನು ತಿರಸ್ಕರಿಸಲಿದ್ದಾರೆ. ಶಿವಾಜಿನಗರ ಕ್ಷೇತ್ರದಲ್ಲಿ ಭಾಜಪ ಅರಳಬೇಕೆಂಬುದು ನಮ್ಮ ಕನಸಾಗಿದೆ. ದೇಶ ಹಾಗೂ ನಾಡಿನ ಸಮಗ್ರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದೇವೆ. ಬೂತ್ ಮಟ್ಟದ ಸಂಘಟನೆ ಮಾಡುವಾಗಿ ಸ್ಥಳೀಯ ಸಮಸ್ಯೆಗಳೇನು ಎಂಬುದರ ಅರಿವಿರಬೇಕು. ಆಯಾ ವಾರ್ಡಿನಲ್ಲಿರುವ ರಸ್ತೆ, ನೀರಿನ ಸಮಸ್ಯೆ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
















































