ಬೆಂಗಳೂರು: ಬೀದರ್ ಹಾಗೂ ಹೊನ್ನೆಕೇರಿ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಚಿರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ, ಇಂದು ಜಿಲ್ಲಾ ಅರಣ್ಯಾಧಿಕಾರಿಗಳು, ಜಿಲ್ಲಾಧಿಕಾರಿ, ಸಿಇಓ ಹಾಗೂ ಎಸ್‌ಪಿ ಅವರೊಂದಿಗೆ ತುರ್ತು ಸಭೆ ನಡೆಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸೂಚನೆಗಳನ್ನು ಅರಣ್ಯ ಸಚಿವ ಈಶ್ವರ್ ಖಂಡ್ರೆ ನೀಡಿದ್ದಾರೆ.
ಚಿರತೆ ಸಂಚರಿಸುತ್ತಿರುವ ಸುತ್ತಮುತ್ತಲಿನ ಗ್ರಾಮಗಳಲ್ಲಿ ತಕ್ಷಣ ಡಂಗುರ ಸಾರಬೇಕು, ಗ್ರಾಮ ಸಭೆಗಳನ್ನು ನಡೆಸಿ ಜನರಿಗೆ ಜಾಗೃತಿ ಮೂಡಿಸಬೇಕು ಹಾಗೂ ಭಿತ್ತಿಪತ್ರಗಳನ್ನು ಅಂಟಿಸಿ ಎಚ್ಚರಿಕಾ ಸೂಚನೆಗಳನ್ನು ನೀಡಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಬೇಕಾದ ಮುನ್ನೆಚ್ಚರಿಕೆಗಳು:
ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ಅನಾವಶ್ಯಕವಾಗಿ ಹೊರಗೆ ಓಡಾಡಬಾರದು.
ರಾತ್ರಿ ಹೊತ್ತಲ್ಲಿ ಮಕ್ಕಳನ್ನು ಮನೆಯ ಹೊರಗೆ ಬಿಡಬಾರದು.
ರಾತ್ರಿ ವೇಳೆ ಸಂಚರಿಸುವಾಗ ಟಾರ್ಚ್/ಬೆಳಕು ಬಳಸಿ ಓಡಾಡಬೇಕು.
ಪಶುಗಳನ್ನು ಮುಚ್ಚಿದ, ಬೆಳಕು ಇರುವ ಕೊಟ್ಟಿಗೆಯಲ್ಲಿ ಇರಿಸಬೇಕು.
ಹೊಲ ಅಥವಾ ಅರಣ್ಯ ಪ್ರದೇಶಗಳಿಗೆ ಒಬ್ಬರೇ ಹೋಗದೆ, ಗುಂಪಾಗಿ ತೆರಳಬೇಕು.
ಚಿರತೆ ಕಂಡುಬಂದರೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು.
ಅರಣ್ಯ ಇಲಾಖೆ ನಿರಂತರ ಪೆಟ್ರೋಲಿಂಗ್ ನಡೆಸಿ ಪರಿಸ್ಥಿತಿಯನ್ನು ನಿಗಾದಲ್ಲಿ ಇಡಬೇಕು ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಆದರೆ ಎಚ್ಚರಿಕೆ ಮತ್ತು ಜಾಗ್ರತೆ ಅಗತ್ಯವಾಗಿದೆ. ಜನರ ಸುರಕ್ಷತೆ ನಮ್ಮ ಮೊದಲ ಆದ್ಯತೆ ಎಂದವರು ತಿಳಿಸಿದ್ದಾರೆ.

























































