ಬೆಂಗಳೂರು: ನೂತನವಾಗಿ ಬಿಎಂಟಿಸಿ ಅಧ್ಯಕ್ಷರಾಗಿ ನೇಮಕಗೊಂಡಿರುವ ವಿ.ಎಸ್. ಆರಾಧ್ಯ ಅವರು ಶನಿವಾರ ಪದಗ್ರಹಣ ಮಾಡಿದರು.
ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ವಿಧಾನ ಪರಿಷತ್ ಸದಸ್ಯ ಸಲೀಮ್ ಅಹಮದ್ ಅವರ ಸಮ್ಮುಖದಲ್ಲಿ ಆರಾಧ್ಯ ಅವರು ವಿಶೇಷ ಪೂಜೆ ಸಲ್ಲಿಸಿ ಅಧಿಕಾರ ಸ್ವೀಕಾರಿಸಿದರು. ಮಾಜಿ ಬಿಬಿಎಂಪಿ ಸದಸ್ಯ ಎಂ.ಬಿ. ಮೋಹನ್ ಕುಮಾರ್ ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ಪದಗ್ರಹಣದ ನಂತರ ಮಾತನಾಡಿದ ಆರಾಧ್ಯ ಅವರು, “ನಾನು ಕಳೆದ 40 ವರ್ಷಗಳಿಂದ ಅಖಿಲ ಭಾರತ ಎನ್‌ಎಸ್‌ಯುಐ ಮೂಲಕ ರಾಜಕೀಯ ಜೀವನ ಆರಂಭಿಸಿ ಯುವ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್, ಹಾಗೂ ಪ್ರಸ್ತುತ ಕೆಪಿಸಿಸಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದೇನೆ,” ಎಂದರು.
“ಕಾಂಗ್ರೆಸ್ ಪಕ್ಷ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಸಿದ್ಧಾಂತದಡಿ ಆಡಳಿತ ನಡೆಸುತ್ತಿದೆ. ಎಲ್ಲ ಧರ್ಮ, ಜಾತಿ ಹಾಗೂ ವರ್ಗದ ಜನರಿಗೆ ಸಮಾನ ಅವಕಾಶ ನೀಡುವುದು ನಮ್ಮ ಪಕ್ಷದ ಧ್ಯೇಯ. ಬಡವರ ಪರವಾಗಿ, ಜಾತ್ಯತೀತ ಸಿದ್ಧಾಂತದ ಆಧಾರದ ಮೇಲೆ ಕಾಂಗ್ರೆಸ್ ಸಂಘಟನೆ ಬಲಪಡಿಸುತ್ತಿದೆ,” ಎಂದು ಹೇಳಿದರು.
“ಸಾಮಾನ್ಯ ಕಾರ್ಯಕರ್ತರಿಗೂ ಕಾಂಗ್ರೆಸ್‌ನಲ್ಲಿ ಉಜ್ವಲ ಭವಿಷ್ಯವಿದೆ. ಪಕ್ಷವು ಕಾರ್ಯಕರ್ತರಲ್ಲಿ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ,” ಎಂದ ಅವರು, ಬಿಎಂಟಿಸಿ ಜಾರಿಗೆ ತಂದ ‘ಶಕ್ತಿ ಯೋಜನೆ’ಯಿಂದ ಲಕ್ಷಾಂತರ ಮಹಿಳೆಯರು ಪ್ರಯೋಜನ ಪಡೆಯುತ್ತಿರುವುದಾಗಿ ಹೇಳಿದರು.

























































