ಹುಬ್ಬಳ್ಳಿ: ಬರ ಪರಿಹಾರವನ್ನು ಚುನಾವಣೆಗೆ ಬಳಸಿಕೊಳ್ಳುವ ಅನುಮಾನವಿದೆ. ಡಿಬಿಟಿ ಮುಖಾಂತರವೇ ರೈತರಿಗೆ ಪರಿಹಾರ ನೀಡಬೇಕೆಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯದ ನಂತರ ಒಂದೇ ಸಲಕ್ಕೆ 3,454 ಕೋಟಿ ರೂ. ಪರಿಹಾರ ನೀಡಿದ ಏಕೈಕ ಪ್ರಧಾನಿ ಎಂದರೆ ಅದು ನರೇಂದ್ರ ಮೋದಿ ಮಾತ್ರ. ಹಿಂದಿನ ಕಾಂಗ್ರೆಸ್ನ ಯಾವುದೇ ಸರ್ಕಾರಗಳು ಇಷ್ಟು ಹಣ ನೀಡಿರಲಿಲ್ಲ. ಆದರೆ ಈ ಹಣವನ್ನು ಬೇರೆ ರಾಜ್ಯಗಳಿಗೆ ಚುನಾವಣೆಗಾಗಿ ಕಳುಹಿಸುವ ನೀಚ ಕೆಲಸವನ್ನು ಕಾಂಗ್ರೆಸ್ ಮಾಡಬಾರದು. ಫ್ರೂಟ್ಸ್ನಲ್ಲಿ ಇನ್ನೂ ರೈತರ ನೋಂದಣಿಯಾಗಿಲ್ಲ. ಈ ಹಣ ದುರ್ಬಳಕೆ ಮಾಡಲು ಈ ರೀತಿ ಸಂಚು ಮಾಡಲಾಗಿದೆ. ಡಿಬಿಟಿ ಮೂಲಕ ರೈತರಿಗೆ ನೇರವಾಗಿ ಹಣ ನೀಡಬೇಕು. ಇದರ ದುಪ್ಪಟ್ಟು ಮೊತ್ತವನ್ನು ರಾಜ್ಯ ಸರ್ಕಾರ ನೀಡಬೇಕು ಎಂದು ಆಗ್ರಹಿಸಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಕಾರ ಇದು ಆನೆಗೆ ಅರೆಕಾಸಿನ ಮಜ್ಜಿಗೆಯಂತೆ. ಆದರೆ ಕಾಂಗ್ರೆಸ್ ಆನೆಗೆ ಸಾಸಿವೆ ಕಾಳಿನಷ್ಟೂ ಪರಿಹಾರ ನೀಡಿಲ್ಲ. 2008 ರಲ್ಲಿ ಬರ ಬಂದಾಗ 516 ಕೋಟಿ ರೂ. ಕೇಳಿದರೆ 1.16 ಕೋಟಿ ರೂ. ಪರಿಹಾರ ನೀಡಿದ್ದರು. 2010-11 ರಲ್ಲಿ ಪ್ರವಾಹವಾದಾಗ 1,045 ಕೋಟಿ ರೂ. ಕೇಳಿದಾಗ ನಯಾಪೈಸೆಯೂ ನೀಡಲಿಲ್ಲ. ಇವರನ್ನು ಪುಣ್ಯಾತ್ಮರು ಅನ್ನಬೇಕೋ, ಪಾಪಾತ್ಮರು ಎನ್ನಬೇಕೋ? ಆಗ ಕಾಂಗ್ರೆಸ್ ಸಂಸದರು ಏನು ಮಾಡಿದ್ದರು? ಸಿದ್ದರಾಮಯ್ಯ ಆಗ ನಿದ್ದೆ ಮಾಡುತ್ತಿದ್ದರಾ? ಎಂದು ಪ್ರಶ್ನೆ ಮಾಡಿದರು.
2019-20 ರಲ್ಲಿ ಪ್ರವಾಹವಾದಾಗ ರಾಜ್ಯ ಸರ್ಕಾರ 3,837 ಕೋಟಿ ರೂ. ಕೇಳಿದ್ದು, ಕೇಂದ್ರ ಸರ್ಕಾರ 3412 ಕೋಟಿ ರೂ. ನೀಡಿತ್ತು. ಅಂದರೆ ಇದು 88% ಆಗಿತ್ತು. 2020-21 ರಲ್ಲಿ ಪ್ರವಾಹವಾದಾಗ 2,242 ಕೋಟಿ ರೂ. ಕೇಳಿದ್ದು, ಕೇಂದ್ರ ಸರ್ಕಾರ 1480 ಕೋಟಿ ರೂ. ಅಂದರೆ 66% ನೀಡಿತ್ತು. ಒಟ್ಟಾರೆಯಾಗಿ 25,591 ಕೋಟಿ ರೂ. ಕೇಳಿದ್ದು, ಪ್ರಧಾನಿ ಮೋದಿ 15,920 ಕೋಟಿ ರೂ. ನೀಡಿದ್ದಾರೆ. ನರೇಂದ್ರ ಮೋದಿ ಸರ್ಕಾರ ಒಟ್ಟು 62% ನೀಡಿದ್ದು, ಮನಮೋಹನ್ ಸಿಂಗ್ ಸರ್ಕಾರ ಕೇವಲ 10% ನೀಡಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಲಿ ಎಂದು ಒತ್ತಾಯಿಸಿದರು.
ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಚುನಾವಣಾ ಆಯೋಗಕ್ಕೆ ಅಧಿಕೃತವಾಗಿ ಅನುಮತಿ ಕೇಳಿದ್ದರು. ಅದನ್ನು ತಿಳಿದುಕೊಂಡು ಕಾಂಗ್ರೆಸ್ ನಾಯಕರು ನಾವೇ ಮಾಡಿಸಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಸರ್ಕಾರದ ಬಳಿ ಹಣವಿದೆ ಎಂದರೆ ದುಪ್ಪಟ್ಟು ಪರಿಹಾರ ನೀಡಲಿ. ಮಳೆಯಾಶ್ರಿತ ಜಮೀನಿಗೆ ಹೆಕ್ಟೇರ್ಗೆ 6,800 ರೂ. ಮಾರ್ಗಸೂಚಿ ದರವಿದ್ದು, ಬಿಜೆಪಿ ಸರ್ಕಾರದಿಂದ ಹೆಚ್ಚುವರಿಯಾಗಿ 6,800 ರೂ. ಸೇರಿಸಿ ಒಟ್ಟು 13,600 ರೂ. ನೀಡಲಾಗಿತ್ತು. ನೀರಾವರಿ ಜಮೀನಿಗೆ ಹೆಕ್ಟೇರ್ಗೆ 13,500 ರೂ. ಮಾರ್ಗಸೂಚಿ ದರವಿದ್ದು, ಬಿಜೆಪಿ ಸರ್ಕಾರದಿಂದ 11,500 ರೂ. ಸೇರಿಸಿ ಒಟ್ಟು 25,000 ರೂ. ನೀಡಲಾಗಿತ್ತು. ಬಹುವಾರ್ಷಿಕ ಬೆಳೆ ಜಮೀನಿಗೆ 18,000 ರೂ. ಮಾರ್ಗಸೂಚಿ ದರವಿದ್ದು, ಬಿಜೆಪಿ ಸರ್ಕಾರದಿಂದ 10,000 ರೂ. ಸೇರಿಸಿ ಒಟ್ಟು 28,000 ರೂ. ನೀಡಲಾಗಿತ್ತು ಎಂದು ನೆನಪಿಸಿದರು.
ಸಂಪತ್ತಿನ ಹಂಚಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಬೇಕು. ಇದರಲ್ಲಿ ಸಾಮಾಜಿಕ ನ್ಯಾಯವೇ ಇಲ್ಲ. ಹಿಂದುಳಿದ ವರ್ಗಗಳ ಮೀಸಲನ್ನು ಅಲ್ಪಸಂಖ್ಯಾತರಿಗೆ ನೀಡುವುದಾದರೆ ಹಿಂದುಳಿದ ವರ್ಗಗಳ ಮಕ್ಕಳ ಉದ್ಯೋಗ, ವ್ಯಾಸಂಗ ಏನಾಗಬೇಕು? ಇದು ಸಂವಿಧಾನ ತಿರುಚುವ ಪ್ರಯತ್ನ. ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲು ಇಲ್ಲ ಎಂದು ಅಂಬೇಡ್ಕರ್ ಹೇಳಿದ್ದಾರೆ. ಇವರು ಅಂಬೇಡ್ಕರ್ ವಿರೋಧಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.