ಬೆಂಗಳೂರು: “ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಡೆತ್ ಟ್ಯಾಕ್ಸ್ ಹಾಕಲ್ಲ, ಬರ್ತ್ ಟ್ಯಾಕ್ಸ್ ಹಾಕಲ್ಲ. ಸ್ಯಾಮ್ ಪಿತ್ರೊಡಾ ಅವರ ಹೇಳಿಕೆ ವೈಯಕ್ತಿಕ, ಅದಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವೇಳೆ ಪಿತ್ರಾರ್ಜಿತ ಆಸ್ತಿಯಲ್ಲಿ 50% ಸರ್ಕಾರ ಪಡೆಯಬೇಕು ಎಂಬ ಪಿತ್ರೊಡಾ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಇದು ಭಾರತ. ಈ ಬಗ್ಗೆ ಜೈರಾಮ್ ರಮೇಶ್ ಅವರು ನಮ್ಮ ಪಕ್ಷದ ಪರವಾಗಿ ಸ್ಪಷ್ಟನೆ ನೀಡಿದ್ದಾರೆ. ಯಾವುದೇ ಡೆತ್ ಟ್ಯಾಕ್ಸ್, ಬರ್ತ್ ಟ್ಯಾಕ್ಸ್ ಇಲ್ಲ. ಈ ದೇಶದ ಪರಂಪರೆ, ಪದ್ಧತಿ ಮುಂದುವರಿಯಲಿದೆ. ಯಾವುದೂ ಕೂಡ ನಮ್ಮ ಪಕ್ಷದಲ್ಲಿ ತೀರ್ಮಾನ ಆಗಿಲ್ಲ. ಅದು ಸುಳ್ಳು, ಅದಕ್ಕೆ ನಾವು ಅವಕಾಶ ನೀಡುವುದಿಲ್ಲ. ನಮ್ಮ ದೇಶದಲ್ಲಿ ರಾಜಕಾರಣದಲ್ಲಿ ತಂದೆ ಹಾಗು ಪೂರ್ವಜರ ಹೆಸರಿನಲ್ಲಿ ಚುನಾವಣೆ ಮಾಡುತ್ತಿರುವಾಗ ಅವರ ಆಸ್ತಿ ವರ್ಗಾವಣೆಗೆ ಅವಕಾಶ ನೀಡುತ್ತಾರಾ? ದೇಶದ ಸಂಪತ್ತನ್ನು ನಗದೀಕರಣ ಮಾಡಲು ಬಿಜೆಪಿ ಮುಂದಾಗಿದೆ ಎಂಬ ಮಾಧ್ಯಮ ವರದಿ ಓದಿದ್ದ ನೆನಪು ನನಗೆ. ನಮ್ಮ ಪ್ರನಾಳಿಕೆಯಲ್ಲಿರುವ ಅಂಶಗಳು ಮಾತ್ರ ಪಕ್ಷದ ನಿಲುವು. ಅದರಿಂದಾಚೆಗಿನ ಅಂಶಗಳಿಗೆ ಪಕ್ಷಕ್ಕೆ ಸಂಬಂಧವಿಲ್ಲ ಎಂದರು,
ಪಿತ್ರೋಡಾ ಅವರದು ವೈಯಕ್ತಿಕ ಅಭಿಪ್ರಾಯವೇ ಹೊರತು ಪಕ್ಷದ ಅಭಿಪ್ರಾಯ ಅಲ್ಲ. ಇಂತಹ ಚರ್ಚೆ ಪಕ್ಷದಲ್ಲಿ ಆಗಿಲ್ಲ. ಇಂತಹ ಹೇಳಿಕೆಗಳನ್ನು ನಾವು ಒಪ್ಪುವುದಿಲ್ಲ” ಎಂದು ತಿಳಿಸಿದರು.