ಕೊರೋನಾ ಮುನ್ನೆಚ್ಚರಿಕೆ ಸಲುವಾಗಿ ಸುಳ್ಯದ ಮುರೂರು ಗಡಿಯಲ್ಲಿ ತೆಗೆದುಕೊಂಡಿರುವ ಸುರಕ್ಷತಾ ಕ್ರಮಗಳ ಹಿನ್ನೆಲೆಯಲ್ಲಿ, ನಿನ್ನೆ ಸಂಜೆ ಎ.ಎಸ್.ಐ. ಭಾಸ್ಕರ್ ಪ್ರಸಾದ್ ಹಾಗೂ ಹೆಡ್ ಕಾನ್ಸ್ ಟೇಬಲ್ ರಾಮ ನಾಯ್ಕರು ಕರ್ತವ್ಯದಲ್ಲಿದ್ದು ಜನರ ಹಾಗೂ ವಾಹನಗಳ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ಪರಪ್ಪೆಯ ಸಿನಾನ್ ಎಂಬ ಯುವಕ ಮುರೂರು ಗಡಿಭಾಗಕ್ಕೆ ಬಂದು ಪೋಲೀಸರ ಮಾತನ್ನು ಕೇಳದೇ ಗಡಿ ದಾಟಲು ಯತ್ನ ಮಾಡಿದ್ದಾನೆ. ಗಡಿ ದಾಟದಂತೆ ಪೊಲೀಸರು ಮನವಿ ಮಾಡುತ್ತಿದ್ದಂತೆ ಆತ ನೆಲದಿಂದ ಕಲ್ಲು ತೆಗೆದು ಏಕಾಏಕಿ ಪೋಲೀಸರ ಮೇಲೆ ಬಿಸಾಡಲು ಆರಂಭಿಸಿದ್ದಾನೆ. ಪರಿಣಾಮವಾಗಿ ಕರ್ತವ್ಯದಲ್ಲಿದ್ದ ಎ.ಎಸ್.ಐ. ಭಾಸ್ಕರ ಪ್ರಸಾದ್ ಹಾಗೂ ಪೋಲಿಸ್ ಸಿಬ್ಬಂದಿ ರಾಮ ನಾಯ್ಕರಿಗೆ ಗಾಯಗಳಾಗಿದೆ.
ಮಾತ್ರವಲ್ಲದೆ ಈತ ಸ್ಧಳದಲ್ಲಿದ್ದ ಹೈವೆ ಪಟ್ರೋಲ್ ವಾಹನಕ್ಕೂ ಕಲ್ಲು ಬಿಸಾಡಲು ಆರಂಭಿಸಿದ್ದಾನೆ. ಕೂಡಲೇ ವಿಷಯ ತಿಳಿದು ಸುಳ್ಯ ಎಸ್.ಐ. ಹರೀಶ್ ಕೂಡಾ ಮುರೂರಿಗೆ ಆಗಮಿಸಿದ್ದು, ಗಾಯಾಳು ಪೋಲೀಸರಿಗೆ ಚಿಕಿತ್ಸೆ ನೀಡಲಾಗಿದೆ. ಕಲ್ಲು ಹೊಡೆದು ಆರೋಪಿಯು ಓಡಿ ಹೋಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಇನ್ನು ಆರೋಪಿ ವಿರುದ್ಧ ಸುಳ್ಯ ಪೋಲಿಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 504,323,332,353, ಹಾಗೂ ಸರಕಾರಿ ಸ್ವತ್ತುಗಳ ಹಾನಿ ಮಾಡಿದ ಪ್ರಕರಣ ಸೇರಿದಂತೆ ಪ್ರಕರಣ ದಾಖಲಾಗಿದೆ.