ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಭಾರತಕ್ಕೆ ಆರ್ಥಿಕ, ಭದ್ರತಾ ಹಾಗೂ ಮಾನವೀಯ ಸವಾಲುಗಳು ಎದುರಾಗುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಸಂಘರ್ಷದ ಕುರಿತು ಸದನದಲ್ಲಿ ಮಾತನಾಡಿದ ಅವರು, “ಪಶ್ಚಿಮ ಏಷ್ಯಾದ ಪರಿಸ್ಥಿತಿ ಕಳವಳಕಾರಿಯಾಗಿದೆ. ಈ ಬಿಕ್ಕಟ್ಟು ಈಗ ಮೂರು ವಾರಗಳನ್ನು ಮೀರಿ ತೀವ್ರಗೊಂಡಿದೆ. ಇದರ ಪರಿಣಾಮ ಜಾಗತಿಕ ಆರ್ಥಿಕತೆ ಮತ್ತು ಜನಜೀವನದ ಮೇಲೆ ಸ್ಪಷ್ಟವಾಗಿ ಕಾಣಿಸುತ್ತಿದೆ” ಎಂದು ಹೇಳಿದರು.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಈ ಕುರಿತು ಈಗಾಗಲೇ ಸದನಕ್ಕೆ ಮಾಹಿತಿ ನೀಡಿದ್ದಾರೆ ಎಂದು ಪ್ರಧಾನಿ ಉಲ್ಲೇಖಿಸಿದರು.
ಭಾರತ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡಿದ ಮೋದಿ, “ಈ ಸಂಘರ್ಷವು ಭಾರತಕ್ಕೆ ಅನಿರೀಕ್ಷಿತ ಸವಾಲುಗಳನ್ನು ತಂದಿದೆ. ಅವು ಆರ್ಥಿಕ, ರಾಷ್ಟ್ರೀಯ ಭದ್ರತೆ ಹಾಗೂ ಮಾನವೀಯತೆಗೂ ಸಂಬಂಧಿಸಿದೆ. ಯುದ್ಧದಲ್ಲಿರುವ ಮತ್ತು ಪ್ರಭಾವಿತ ರಾಷ್ಟ್ರಗಳೊಂದಿಗೆ ನಮ್ಮ ವ್ಯಾಪಕ ವ್ಯಾಪಾರ ಸಂಬಂಧಗಳಿವೆ” ಎಂದು ಹೇಳಿದರು.
ಇಂಧನ ಭದ್ರತೆ ಕುರಿತಂತೆ ಅವರು, “ನಮ್ಮ ಕಚ್ಚಾ ತೈಲ ಮತ್ತು ಅನಿಲದ ಬಹುಪಾಲು ಪೂರೈಕೆ ಈ ಪ್ರದೇಶದಿಂದ ಬರುತ್ತದೆ. ಈ ಕಾರಣದಿಂದಾಗಿ ಸಂಘರ್ಷದ ಪರಿಣಾಮ ಭಾರತಕ್ಕೆ ಹೆಚ್ಚಾಗಿದೆ” ಎಂದು ಹೇಳಿದರು.
ಗಲ್ಫ್ ರಾಷ್ಟ್ರಗಳಲ್ಲಿ ಭಾರತೀಯರ ಸ್ಥಿತಿಗತಿ ಬಗ್ಗೆ ಮಾತನಾಡಿದ ಪ್ರಧಾನಿ, “ಸುಮಾರು ಒಂದು ಕೋಟಿ ಭಾರತೀಯರು ಗಲ್ಫ್ ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸಮುದ್ರ ಮಾರ್ಗಗಳಲ್ಲಿ ವಾಣಿಜ್ಯ ಹಡಗುಗಳಲ್ಲಿ ಭಾರತೀಯ ಸಿಬ್ಬಂದಿಯೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇದರಿಂದ ನಮ್ಮ ಕಾಳಜಿಗಳು ಸಹಜವಾಗಿ ಹೆಚ್ಚಿವೆ” ಎಂದರು.
ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಭಾರತೀಯರ ಸುರಕ್ಷತೆ ಕುರಿತು ಸರ್ಕಾರ ಕೈಗೊಂಡ ಕ್ರಮಗಳನ್ನು ವಿವರಿಸಿದ ಅವರು, “ಈ ಯುದ್ಧ ಆರಂಭವಾದಾಗಿನಿಂದಲೇ ಎಲ್ಲ ಭಾರತೀಯರಿಗೆ ಅಗತ್ಯ ಸಹಾಯ ಒದಗಿಸಲಾಗುತ್ತಿದೆ. ನಾನು ಸ್ವತಃ ಪಶ್ಚಿಮ ಏಷ್ಯಾದ ಹಲವು ರಾಷ್ಟ್ರಗಳ ನಾಯಕರೊಂದಿಗೆ ಮಾತುಕತೆ ನಡೆಸಿದ್ದೇನೆ. ಅವರು ಭಾರತೀಯರ ಸುರಕ್ಷತೆಗೆ ಭರವಸೆ ನೀಡಿದ್ದಾರೆ” ಎಂದು ಹೇಳಿದರು.
ಕೆಲವರು ಪ್ರಾಣ ಕಳೆದುಕೊಂಡಿರುವುದು ಮತ್ತು ಕೆಲವರು ಗಾಯಗೊಂಡಿರುವುದನ್ನು ಉಲ್ಲೇಖಿಸಿದ ಪ್ರಧಾನಿ, “ಇಂತಹ ಸಂಕಷ್ಟದ ಸಮಯದಲ್ಲಿ ಕುಟುಂಬಗಳಿಗೆ ಅಗತ್ಯ ಬೆಂಬಲ ನೀಡಲಾಗುತ್ತಿದೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ” ಎಂದು ತಿಳಿಸಿದರು.
“ಯಾವುದೇ ಬಿಕ್ಕಟ್ಟಿನ ಪರಿಸ್ಥಿತಿಯಲ್ಲೂ ದೇಶದೊಳಗೂ, ವಿದೇಶದಲ್ಲೂ ಇರುವ ಭಾರತೀಯರ ಸುರಕ್ಷತೆ ಮತ್ತು ಭದ್ರತೆ ನಮ್ಮ ಮೊದಲ ಆದ್ಯತೆ” ಎಂದು ಪ್ರಧಾನಿ ಮೋದಿ ಪುನರುಚ್ಚರಿಸಿದರು.























































