ಬೆಂಗಳೂರು; ರಾಜಧಾನಿಯನ್ನೊಳಗೊಂಡು ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಗೆಲುವು ಸಾಧಿಸಿದ್ದಾರೆ.
ಚುನಾವಣೆಯ ಮತಗಳ ಎಣಿಕೆ ಇಂದು ನಡೆದಿದ್ದು, ಕಾಂಗ್ರೆಸ್ನ ಪುಟ್ಟಣ್ಣ ಅವರು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎ.ಪಿ.ರಂಗನಾಥ್ ವಿರುದ್ದ ಗೆಲುವು ಸಾಧಿಸಿ ಪುನರಾಯ್ಕೆಯಾಗಿದ್ದಾರೆ. ಮತಗಳ ಎಣಿಕೆಯುದ್ದಕ್ಕೂ ಮುನ್ನಡೆ ಕಾಯ್ದುಕೊಂಡು ಬಂದ ಪುಟ್ಟಣ್ಣ, ಅಂತಿಮವಾಗಿ 1,507 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದರು.
ಈ ಹಿಂದೆ ಬಿಜೆಪಿ ಶಾಸಕರಾಗಿದ್ದ ಪುಟ್ಟಣ್ಣ ಅವರು ಕಳೆದ ವಿಧಾನಸಭಾ ಚುನಾವಣೆ ವೇಳೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದರು. ಅವರ ರಾಜೀನಾಮೆಯಿಂದ ತೆರವಾಗಿದ್ದ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಇದೀಗ ಉಪಚುನಾವಣೆ ನಡೆದಿದ್ದು, ಪುಟ್ಟಣ್ಣ ಅವರೇ ಪುನರಾಯ್ಕೆಯಾಗಿದ್ದಾರೆ. ಈ ಫಲಿತಾಂಶವು ಬಿಜೆಪಿ-ಜೆಡಿಎಸ್ ಮೈತ್ರಿಗೆ ಆಗಿರುವ ಮೊದಲ ಆಘಾತ ಎಂದು ರಾಜಕೀಯ ವಿಶ್ಲೇಷಕರು ಬಣ್ಣಿಸಿದ್ದಾರೆ.