ಬೆಂಗಳೂರು: 2022 ನೇ ವರ್ಷವು ಆರೋಗ್ಯ ಕ್ಷೇತ್ರದಲ್ಲಿನ ಮೂಲಸೌಕರ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ವರ್ಷವಾಗಿದ್ದು, ಅನೇಕ ಗಮನಾರ್ಹ ಸಾಧನೆಗಳಾಗಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ವರ್ಷದ ಸಾಧನೆಗಳ ಮಾಹಿತಿಯನ್ನು ಸಚಿವರು ಹಂಚಿಕೊಂಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದು ಎಲ್ಲರಿಗೂ ಆರೋಗ್ಯದ ಹಕ್ಕು ನೀಡಲಾಗಿದೆ. ಕರ್ನಾಟಕವು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಆರೋಗ್ಯ ವಲಯದಲ್ಲಿ ಮಾದರಿ ರಾಜ್ಯವಾಗಿ ಹೊರಹೊಮ್ಮಿದೆ ಎಂದು ಹೇಳಿದರು.
ಯಾವುದೇ ರಾಜ್ಯದ ಆರೋಗ್ಯದ ಮಾನದಂಡ ಅಳೆಯಲು ತಾಯಿ ಮತ್ತು ಶಿಶು ಮರಣ ಅಳತೆಗೋಲು. ತಾಯಿ ಶಿಶು ಮರಣ ದರ ಶೇ 83 ರಿಂದ 69ಕ್ಕೆ, ಎನ್.ಎಫ್.ಎಚ್.ಎಸ್ -5 ವರದಿ ಪ್ರಕಾರ, ಜನನದ ಸಮಯದಲ್ಲಿ ಲಿಂಗಾನುಪಾತ 910 ರಿಂದ 978 ಕ್ಕೆ, ಶಿಶು ಮರಣ ದರ 21 ರಿಂದ 19ಕ್ಕೆ, ನವಜಾತ ಶಿಶುಗಳ ಮರಣ ದರ 16 ರಿಂದ 14ಕ್ಕೆ ತಗ್ಗಿದೆ. ಹೆರಿಗೆ ವಲಯದಲ್ಲೂ ಸುಧಾರಣೆಯಾಗಿದ್ದು, 97% ರಷ್ಟು ಸಾಂಸ್ಥಿಕ ಹೆರಿಗೆಗಳು ದಾಖಲಾಗಿರುವುದು ಮಹತ್ವದ ಸಂಗತಿ. ʼಕಿವುಡ ಮುಕ್ತ ಕರ್ನಾಟಕʼದಡಿ ನವಜಾತ ಶಿಶುಗಳಲ್ಲಿ ಶ್ರವಣದೋಷ ಪತ್ತೆ ಮಾಡಿ ಕಾಕ್ಲಿಯರ್ ಇಂಪ್ಲಾಂಟ್ ಅಳವಡಿಸಲಾಗುತ್ತಿದೆ ಎಂದರು.
ಲಕ್ಷ್ಯ ಕಾರ್ಯಕ್ರಮದಡಿ 68% ಆಸ್ಪತ್ರೆಗಳಿಗೆ ಮಾನ್ಯತೆ ನೀಡಿ, 55 ಸೌಲಭ್ಯಗಳನ್ನು ರಾಷ್ಟ್ರ ಮಟ್ಟದಲ್ಲಿ ಪ್ರಮಾಣೀಕರಿಸಲಾಗಿದೆ. 42,524 ಆಶಾ ಕಾರ್ಯಕರ್ತೆಯರಿಗೆ ಮಂಜೂರಾತಿ, ವಿಶ್ವ ಆರೋಗ್ಯ ಸಂಸ್ಥೆ ಪೋರ್ಟಲ್ನಲ್ಲಿ ಅನುಷ್ಠಾನ ಮತ್ತು ವರದಿ ಮಾಡುವಲ್ಲಿ ಮುಂಚೂಣಿಯಲ್ಲಿದ್ದು, ಇ-ಸಂಜೀವಿನಿ ಟೆಲಿ-ಮೆಡಿಸಿನ್ ಸಮಾಲೋಚನೆಯಡಿ ದೇಶದಲ್ಲಿ 3ನೇ ಸ್ಥಾನದಲ್ಲಿದೆ. ಹೊರರೋಗಿ ಮಾದರಿಯ ಟೆಲಿ-ಸಮಾಲೋಚನೆಯಲ್ಲಿ ಮೊದಲ ಸ್ಥಾನದಲ್ಲಿದ್ದು, ನವೆಂಬರ್ವರೆಗೆ 61.99 ಲಕ್ಷ ಟೆಲಿ ಸಮಾಲೋಚನೆ ನಡೆಸಲಾಗಿದೆ ಎಂದು ಹೇಳಿದರು.
ರಾಜ್ಯ ಮಾನಸಿಕ ಆರೋಗ್ಯ ನಿರ್ವಹಣಾ ವ್ಯವಸ್ಥೆಯ ಇ-ಮನಸ್ ನ ಮಾನಸಿಕ ಆರೋಗ್ಯ ಕಾರ್ಯಕ್ರಮದ ಟೆಲಿ ಸಮಾಲೋಚನೆಯಡಿ ಮಹತ್ವದ ಸಾಧನೆಯಾಗಿದೆ. ಗುಜರಾತ್ ನಲ್ಲಿ ಮೇ ನಲ್ಲಿ ನಡೆದ “ಸ್ವಾಸ್ಥ್ಯ ಚಿಂತನ ಶಿಬಿರ”ದಲ್ಲಿ ಇ-ಮನಸ್ ಕುರಿತು ರಾಜ್ಯದ ಅತ್ಯುತ್ತಮ ಅಭ್ಯಾಸಗಳನ್ನು ಪ್ರಸ್ತುತಪಡಿಸಲಾಗಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ತಜ್ಞರ ಸೇವೆಯನ್ನು ಬಡವರಿಗೆ ಒದಗಿಸಲು ಮತ್ತು ವೈದ್ಯರಿಂದ ತ್ವರಿತ ಸಲಹೆ ಮತ್ತು ಚಿಕಿತ್ಸೆ ಪಡೆಯಲು ಟೆಲಿ ಮೆಡಿಸನ್ ವ್ಯವಸ್ಥೆಯನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಾರಿಗೊಳಿಸಲಾಗಿದೆ. 32,00 ಸಾಮಾನ್ಯ ವೈದ್ಯರು, 600 ತಜ್ಞ ವೈದ್ಯರು ಮತ್ತು 100 ಸೂಪರ್ ಸ್ಪೆಷಾಲಿಟಿ ವೈದ್ಯರು ವೈದ್ಯಕೀಯ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಪಾಳಿಗಳಲ್ಲಿ ವೈದ್ಯಕೀಯ ಸಲಹೆಗಳನ್ನು ನೀಡುತ್ತಿದ್ದಾರೆ. ಟೆಲಿಮೆಡಿಸಿನ್ ಮೂಲಕವೂ ವೈದ್ಯಕೀಯ ಸಲಹೆ ನೀಡಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾಸ್ಪತ್ರೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಡಿ.ಎನ್.ಬಿ ಕೋರ್ಸ್ಗಳನ್ನು, ತಾಲ್ಲೂಕು ಆಸ್ಪತ್ರೆಗಳಲ್ಲಿ ಡಿ.ಎನ್.ಬಿ ಮತ್ತು ಡಿಪ್ಲೋಮಾ ಕೋರ್ಸ್ಗಳನ್ನು ಆರಂಭಿಸಿದ ಮೊದಲ ರಾಜ್ಯ ಕರ್ನಾಟಕ. 2020-21 ರಲ್ಲಿ ಕಾಯಕಲ್ಪ ಪ್ರಶಸ್ತಿಯನ್ನು 8 ಎಚ್.ಡಬ್ಲ್ಯೂ.ಸಿಗಳು ಮೊದಲ ಬಾರಿಗೆ ಪಡೆದಿದ್ದು, ರಾಷ್ಟ್ರಮಟ್ಟದಲ್ಲಿ ಎನ್.ಕ್ಯೂ.ಎ.ಎಸ್ ಪ್ರಕಾರ ಒಟ್ಟು 51 ಸಾರ್ವಜನಿಕ ಆರೋಗ್ಯ ಸೌಲಭ್ಯ ಕೇಂದ್ರಗಳನ್ನು ಪ್ರಮಾಣೀಕರಿಸಲಾಗಿದೆ ಎಂದರು.
ಮೊದಲ ಹಂತದಲ್ಲಿ 114 “ನಮ್ಮ ಕ್ಲಿನಿಕ್”ಗಳನ್ನು ಆರಂಭಿಸಿದ್ದು. 128 ಮಹಿಳಾ ಕ್ಲಿನಿಕ್ಗಳು ಮತ್ತು ನಗರ ಪ್ರದೇಶಗಳಲ್ಲಿ 128 ಪಾಲಿಕ್ಲಿನಿಕ್ಗಳು ಕಾರ್ಯಾರಂಭ ಮಾಡುವ ಹಂತದಲ್ಲಿವೆ. ಜಿಲ್ಲಾ ಆಸ್ಪತ್ರೆಗಳಲ್ಲಿ ನಾಗರಿಕ ಸಹಾಯವಾಣಿ ಆರಂಭಿಸುತ್ತಿದ್ದು, ತಾಲ್ಲೂಕು ಮಟ್ಟದ ಆಸ್ಪತ್ರೆಗಳಿಗೂ ಇದನ್ನು ವಿಸ್ತರಿಸಲಾಗುತ್ತಿದೆ. ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ತಾಯಿ ಎದೆಹಾಲು ಬ್ಯಾಂಕ್ ಸ್ಥಾಪನೆ ಮತ್ತು ಪ್ರಾದೇಶಿಕವಾರು ಹೆಚ್ಚುವರಿಯಾಗಿ 4 ತಾಯಿ ಎದೆಹಾಲು ಬ್ಯಾಂಕ್ ಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಯಕೃತ್ತಿನ ಉರಿಯೂತದ ಉಚಿತ ರೋಗ ಪತ್ತೆ ಮತ್ತು ಚಿಕಿತ್ಸೆಗಾಗಿ ಎಲ್ಲಾ ಜಿಲ್ಲಾಸ್ಪತ್ರೆಗಳು, ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಚಿಕಿತ್ಸಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಸಚಿವರು ಹೇಳಿದರು.
ಕೋವಿಡ್ ಸಾಂಕ್ರಾಮಿಕದ ನಡುವೆ ಮಕ್ಕಳ ಪರೀಕ್ಷೆ, ಸ್ವಾಸ್ಥ್ಯ ಕಿರಣ ಆನ್ಲೈನ್ ವರದಿ ಮತ್ತು ಜಾಡು ಪತ್ತೆ ವ್ಯವಸ್ಥೆಯ ಅನುಷ್ಠಾನದ ಮೂಲಕ 65 ಲಕ್ಷ ಮಕ್ಕಳನ್ನು ತಪಾಸಣೆ ಮಾಡಲಾಗಿದೆ. ಗ್ರಾಮೀಣ ಮಕ್ಕಳ ಆರೋಗ್ಯ ರಕ್ಷಣೆಗೆ “ಆರೋಗ್ಯನಂದನ” ದ ಮೂಲಕ ಮಕ್ಕಳ ವೈದ್ಯರೊಂದಿಗೆ ಆರ್.ಬಿ.ಎಸ್.ಕೆ ತಂಡ ಪ್ರತಿದಿನ ಗ್ರಾಮಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಮಾಡುತ್ತಿದ್ದು, 1.7 ಕೋಟಿ ಪೈಕಿ 69,21,179 ಮಕ್ಕಳನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದರು.
ಎಲ್ಲಾ ಜಿಲ್ಲೆಗಳು ಮತ್ತು 167 ಕೇಂದ್ರಗಳಲ್ಲಿ ಡಯಾಲಿಸಸ್ ಸೇವೆಗಳು ದೊರೆಯುತ್ತಿವೆ. ಕರ್ನಾಟಕ ಸಮಗ್ರ ಪ್ರಾಥಮಿಕ ಆರೋಗ್ಯ ಆರೈಕೆ ಯೋಜನೆಯಡಿ 75% ರಷ್ಟು – 5.9 ಕೋಟಿ ಜನ ನೋಂದಣಿಯಾಗಿದ್ದು 2.82 ಕೋಟಿ 30 ವರ್ಷ ವಯೋಮಿತಿಯವರು ಸೇರಿದ್ದಾರೆ. 1.43 ಕೋಟಿ ಜನರಿಗೆ ಸಾಂಕ್ರಾಮಿಕವಲ್ಲದ ರೋಗಗಳ ಪರೀಕ್ಷೆ ನಡೆಸಲಾಗಿದ್ದು, ಈ ವಲಯದ ನೋಂದಣಿಯಲ್ಲಿ ಮೊದಲ ಮತ್ತು ಪರೀಕ್ಷೆಯಲ್ಲಿ 2ನೇ ಸ್ಥಾನದಲ್ಲಿದೆ. ಚಿಕ್ಕಮಗಳೂರು ಜಿಲ್ಲೆ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಕರ್ನಾಟಕ ಅತ್ಯುತ್ತಮ ಸಾಮರ್ಥ್ಯ ಹೊಂದಿರುವ ರಾಜ್ಯವಾಗಿದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು.
ಶಾಲಾ ಕಣ್ಣು ತಪಾಸಣಾ ಕಾರ್ಯಕ್ರಮದಡಿ 35,73,295 (56.68%) ಮಕ್ಕಳ ತಪಾಸಣೆ ಮಾಡಲಾಗಿದೆ. ರಾಜ್ಯ ಎಂ.ಆರ್.ಐ ಸೇವೆಗಳನ್ನು ಪಿಪಿಪಿ ಮಾದರಿಯಡಿ 6 ಜಿಲ್ಲಾಸ್ಪತ್ರೆಗಳಲ್ಲಿ ಆರಂಭಿಸಲಾಗಿದ್ದು, 15 ಜಿಲ್ಲೆಗಳಿಗೆ ವಿಸ್ತರಿಸಲಾಗುತ್ತಿದೆ. ಅಧಿಸೂಚಿತ ಕ್ಷಯರೋಗ ದರ ತಗ್ಗಿಸುವ ನಿಟ್ಟಿನಲ್ಲಿ ರಾಜ್ಯ 5 ಬೆಳ್ಳಿ ಮತ್ತು 9 ಕಂಚು ಸೇರಿ 14 ಪದಕಗಳನ್ನು ಪಡೆದಿದೆ. ಕೃತಕ ಬುದ್ದಿಮತ್ತೆ ತಂತ್ರಜ್ಞಾನದಡಿ ಐದು ಜಿಲ್ಲೆಗಳಲ್ಲಿ ದೂರದ ರೇಡಿಯೋ ವಿಕಿರಣ ಕೇಂದ್ರಗಳ ಮೂಲಕ ಕ್ಷಯರೋಗ ಪತ್ತೆ ಮಾಡುವ ವ್ಯವಸ್ಥೆಯನ್ನು ಮೊದಲ ಬಾರಿಗೆ ಆರಂಭಿಸಲಾಗಿದೆ ಎಂದು ತಿಳಿಸಿದರು.
ವಿಶ್ವದರ್ಜೆಯ ಆಧುನಿಕ ವೈದ್ಯಕೀಯ ಸೇವೆ ಒದಗಿಸಲು ಸರ್ಕಾರ 108 ಆರೋಗ್ಯ ಕವಚ ಆಂಬ್ಯುಲೆನ್ಸ್ ಮತ್ತು 104 ಆರೋಗ್ಯ ಸಹಾಯವಾಣಿ ಆರೋಗ್ಯ ಹೆಲ್ಪ್ ಲೈನ್ ಸೇವೆಗಾಗಿ ಹೊಸ ಟೆಂಡರ್ ಕರೆಯಲಾಗಿದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ನಿಂದ 42 ಲಕ್ಷ ಫಲಾನುಭವಿಗಳಿಗೆ ಚಿಕಿತ್ಸೆಗಾಗಿ 5,426 ಕೋಟಿ ರೂ. ವೆಚ್ಚ ಮಾಡಲಾಗಿದೆ. ಜ್ಯೋತಿ ಸಂಜೀವಿನಿ ಯೋಜನೆ, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ, ಅಂಗಾಂಗ ಕಸಿ ಯೋಜನೆ, ಕಿವುಡ ಸಾಧನ ಅಳವಡಿಕೆ ಯೋಜನೆ ಉತ್ತಮವಾಗಿ ಅನುಷ್ಠಾನಗೊಂಡಿವೆ ಎಂದರು.
ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ – ಆರೋಗ್ಯ ಕರ್ನಾಟಕದಡಿ ಕೋ ಬ್ರಾಂಡೆಡ್ ಉಚಿತ ಪಿವಿಸಿ ಗುರುತಿನ ಚೀಟಿಗಳನ್ನು ತ್ವರಿತವಾಗಿ ವಿತರಿಸುತ್ತಿದ್ದು, 1.22 ಕೋಟಿ ಫಲಾನುಭವಿಗಳು ನೋಂದಣಿಯಾಗಿದ್ದಾರೆ. ವಿಶೇಷ ವಲಯದ 746 ಹಿರಿಯ ವೈದ್ಯಕೀಯ ಅಧಿಕಾರಿಗಳು, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು – 1048 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು ಮತ್ತು 88- ದಂತ ಆರೋಗ್ಯಾಧಿಕಾರಿಗಳು ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲಾಗಿದೆ. ಕಲ್ಯಾಣ ಕರ್ನಾಟಕ ಗುಂಪಿನಲ್ಲಿ 320 ಅರೆ ವೈದ್ಯಕೀಯ ಹುದ್ದೆಗಳು ಮತ್ತು 558 ಉಳಿದ ಮೂಲ ಗುಂಪಿನ ಹುದ್ದೆಗಳನ್ನು ಭರ್ತಿ ಮಾಡಲು ಆನ್ಲೈನ್ ಅರ್ಜಿ ಕರೆದಿದ್ದು, ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಹೇಳಿದರು.
ನಿಮ್ಹಾನ್ಸ್ ನೊಂದಿಗೆ ಕರ್ನಾಟಕ ಮೆದುಳು ಆರೋಗ್ಯ ಕಾರ್ಯಕ್ರಮದಡಿ ನರ ವೈಜ್ಞಾನಿಕ ಕಾಯಿಲೆಗಳ ಆರೈಕೆ, ತೃತೀಯ ಮಟ್ಟದಲ್ಲಿ ನಿಮ್ಹಾನ್ಸ್, ದ್ವಿತೀಯ ಹಂತದಲ್ಲಿ ಜಿಲ್ಲಾಸ್ಪತ್ರೆಗಳು ಮತ್ತು ಪಿ.ಎಚ್.ಸಿಗಳಲ್ಲಿ ಮೆದುಳು ಆರೋಗ್ಯ ಕ್ಲಿನಿಕಲ್ ಗಳನ್ನು ಸ್ಥಾಪಿಸಲಾಗಿದೆ. ಹೆಚ್ಚು ಒತ್ತಡವಿರುವ 100 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 30 ಹಾಸಿಗೆಗಳ ಸಮುದಾಯ ಆಧಾರಿತ ಆರೋಗ್ಯ ಕೇಂದ್ರಗಳನ್ನು 1,000 ಕೋಟಿ ರೂ. ವೆಚ್ಚದಲ್ಲಿ ಎರಡು ವರ್ಷಗಳಲ್ಲಿ ನಿರ್ಮಿಸಲು ತಾತ್ವಿಕ ಅನುಮೋದನೆ ದೊರೆತಿದೆ. ಜೊತೆಗೆ 43 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ 44832 ಲಕ್ಷ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಯೋಜನೆಯಡಿ 47 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸುತ್ತಿದ್ದು, ವೆರಿಫೈಡ್ ಹೆಲ್ತ್ ಕೇರ್ ಫ್ರೊಫೆಷನಲ್ಸ್ ರಿಜಿಸ್ಟ್ರೀಯಲ್ಲಿ ಎಚ್.ಪಿ.ಆರ್ ಗುರುತಿನ ಚೀಟಿ ಮತ್ತು ಸೌಲಭ್ಯ ಒದಗಿಸುವಲ್ಲಿ ಮೊದಲ ಸ್ಥಾನದಲ್ಲಿದೆ. ರಾಜ್ಯ ಆರೋಗ್ಯ ಮಂಥನದಡಿ ಆಯುಷ್ಮಾನ್ ಉತ್ಕೃಷ್ಟತಾ ಪುರಸ್ಕಾರ ದೊರೆತಿದ್ದು, ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ವಲಯದಲ್ಲಿ 30 ಸಾರ್ವಜನಿಕ ಆಸ್ಪತ್ರೆಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ಹೊಂದಿರುವ ಏಕೈಕ ದೊಡ್ಡ ರಾಜ್ಯವಾಗಿದೆ. ಕಾರವಾದ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಬೋಧನಾ ಆಸ್ಪತ್ರೆಯು ದೇಶದ ಉನ್ನತ ವೈದ್ಯಕೀಯ ಕಾಲೇಜು ಬೋಧನಾ ಆಸ್ಪತ್ರೆಯಾಗಿ ರೂಪುಗೊಂಡಿದೆ. ಎಸ್.ಎ.ಎಸ್.ಟಿ ಅಡಿ ಪ್ರಸ್ತುತ 22 ಆಸ್ಪತ್ರೆಗಳು ನೋಂದಣಿಯಾಗಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.