ಮುಂಬೈ: ‘ಧುರಂಧರ್: ದಿ ರಿವೆಂಜ್’ ಚಿತ್ರಕ್ಕೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದು, “ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕಾದ ಚಿತ್ರ” ಎಂದು ಹೊಗಳಿದ್ದಾರೆ.
ಸೋಮವಾರ ತಮ್ಮ ಸಾಮಾಜಿಕ ಜಾಲತಾಣ Xನಲ್ಲಿ ಪ್ರತಿಕ್ರಿಯಿಸಿದ ಅವರು, “ಎಂತಹ ಚಿತ್ರ ‘ಧುರಂಧರ್ 2’. ನಿರ್ದೇಶಕ ಆದಿತ್ಯ ಧರ್ ಬಾಕ್ಸ್ ಆಫೀಸ್ ಕಾ ಬಾಪ್. ರಣವೀರ್ ಸಿಂಗ್ ಹಾಗೂ ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು. ಇದು ನೋಡಲೇಬೇಕಾದ ಸಿನಿಮಾ. ಜೈ ಹಿಂದ್” ಎಂದು ಬರೆದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ನಿರ್ದೇಶಕ ಆದಿತ್ಯ ಧರ್, ರಜನಿಕಾಂತ್ ಅವರ ಮಾತುಗಳನ್ನು “ಜೀವನದ ಅತ್ಯಂತ ದೊಡ್ಡ ಸೂಪರ್ ಸ್ಟಾರ್ ಕ್ಷಣ” ಎಂದು ವರ್ಣಿಸಿದರು. “ನಮ್ಮಲ್ಲಿ ಮನರಂಜನೆಗೆ ಮಾನದಂಡವೇ ನೀವು. ನಿಮ್ಮಿಂದಲೇ ನಾವು ಪ್ರೇರಿತರಾಗಿದ್ದೇವೆ. ‘ಧುರಂಧರ್ 2’ ಅನ್ನು ನೀವು ನೋಡಲೇಬೇಕಾದ ಸಿನಿಮಾ ಎಂದಿರುವುದು ನನಗೆ ಅತ್ಯಂತ ಗೌರವದ ಸಂಗತಿ” ಎಂದು ಹೇಳಿದರು.
ಆದಿತ್ಯ ಧರ್ ನಿರ್ದೇಶನದ ಈ ಚಿತ್ರದಲ್ಲಿ ರಣವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಬಾಕ್ಸ್ ಆಫೀಸ್‌ನಲ್ಲಿ ಭಾರೀ ಯಶಸ್ಸು ಕಂಡಿದೆ. ದೇಶಾದ್ಯಂತ ಹೆಚ್ಚಿನ ಆಕ್ಯುಪೆನ್ಸಿ, ಮಲ್ಟಿಪಲ್ ಶೋಗಳು ಹೌಸ್‌ಫುಲ್ ಆಗಿರುವುದು, ಡಬ್ ಮಾಡಿದ ಆವೃತ್ತಿಗಳಿಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದು ಈ ಚಿತ್ರದ ಪ್ಯಾನ್-ಇಂಡಿಯಾ ಆಕರ್ಷಣೆಯನ್ನು ತೋರಿಸುತ್ತದೆ.
ಚಿತ್ರಕ್ಕೆ ಆಯುಷ್ಮಾನ್ ಖುರಾನಾ ಮತ್ತು ಅನುಪಮ್ ಖೇರ್ ಸೇರಿದಂತೆ ಹಲವು ಸಿನಿ ಗಣ್ಯರು ಮೆಚ್ಚುಗೆ ಸೂಚಿಸಿದ್ದಾರೆ. ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಚಿತ್ರದ ಯಶಸ್ಸು ಸಾಂಪ್ರದಾಯಿಕ ಸಿನೆಮಾ ರೂಪರೇಷೆಗಳಿಗೆ ಸವಾಲು ಹಾಕಿದೆ ಎಂದು ಹೇಳಿದ್ದಾರೆ.
‘ಧುರಂಧರ್’ ಫ್ರಾಂಚೈಸಿ ಈಗ ಸಾಂಸ್ಕೃತಿಕವಾಗಿ ದೊಡ್ಡ ಮಟ್ಟದ ಪ್ರಭಾವ ಬೀರುತ್ತಿದ್ದು, ಆಕ್ಷನ್, ರಾಷ್ಟ್ರೀಯತೆ ಹಾಗೂ ಸ್ಟಾರ್ ಪವರ್ ಮಿಶ್ರಣದಿಂದ ಪ್ರೇಕ್ಷಕರಲ್ಲಿ ವಿಶೇಷ ಸ್ಥಾನ ಗಳಿಸಿದೆ. ಆದರೆ, ಕೆಲವುವರು ಚಿತ್ರವನ್ನು ಆಡಳಿತ ಪರ ಪ್ರಚಾರವೆಂದು ಟೀಕಿಸಿರುವುದೂ ಗಮನಾರ್ಹವಾಗಿದೆ.

























































