ಬೆಂಗಳೂರು: ಧಾರವಾಡದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿಯನ್ನು ಸೋಲಿಸಲು ಕಾಂಗ್ರೆಸ್ ರಣತಂತ್ರ ರೂಪಿಸಿದೆ. ಜೋಷಿ ವಿರುದ್ದ ಸಮರ ಸಾರಿ, ಪಕ್ಷೇತರ ಅಭ್ಯರ್ಥಿ ದಿಂಗಾಲೇಶ್ವರ ಶ್ರೀಗಳನ್ನು ಬೆಂಬಲಿಸುವ ಸಾಧ್ಯತೆಗಳಿವೆ.
ಈ ರೀತಿಯ ಮಾತುಗಳು ಕೆಪಿಸಿಸಿ ಕಚೇರಿ ಮೊಗಸಾಲೆಯಲ್ಲೇ ಪ್ರತಿಧ್ವನಿಸುತ್ತಿದ್ದು, ಈಗಾಗಲೇ ಧಾರವಾಡ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಿಸಿದ್ದರೂ ಕೊನೆಯ ಕ್ಷಣದಲ್ಲಿ ದಿಂಗಾಲೇಶ್ವರ ಶ್ರೀಗಳನ್ನು ಬೆಂಬಲಿಸುವ ಬಗ್ಗೆ ಪಕ್ಷದ ನಾಯಕರು ಚಿಂತನೆ ನಡೆಸಿದ್ದಾರೆನ್ನಲಾಗಿದೆ. ಧಾರವಾಡ ಭಾಗದಲ್ಲಿ ಜೋಷಿಯವರ ಪ್ರಬಲ ರಾಜಕೀಯ ಎದುರಾಳಿಯಾಗಿರುವ ಮಾಜಿ ಶಾಸಕ ವಿನಯ ಕುಲಕರ್ಣಿಯವರು ಈ ರೀತಿಯ ತಂತ್ರಗಾರಿಕೆ ನಡಸಿದ್ದಾರೆ ಎನ್ನಲಾಗುತ್ತಿದೆ.
ಧಾರವಾಡ ಜಿಲ್ಲೆ ಲಿಂಗಾಯತ ಪ್ರಾಬಲ್ಯದ ಕ್ಷೇತ್ರವೂ ಹೌದು. ಆದರೆ ಈ ಬಾರಿ ಬಿಜೆಪಿಯಾಗಲೀ, ಕಾಂಗ್ರೆಸ್ ಪಕ್ಷವಾಗಲೀ ಲಿಂಗಾಯತ ಸಮುದಾಯದವರಿಗೆ ಟಿಕೆಟ್ ನೀಡಿಲ್ಲ. ಈ ಸ್ಥಿತಿಯಲ್ಲಿ ಲಿಂಗಾಯತ ಸಮುದಾಯದ ದಿಂಗಾಲೇಶ್ವರ ಸ್ವಾಮೀಜಿಯವರು ಪಕ್ಷೇತರರಾಗಿ ಕಣಕ್ಕಿಳಿಯಲು ಮುಂದಾಗಿದ್ದಾರೆ. ಪ್ರಲ್ಹಾದ್ ಜೋಷಿಯವರನ್ನು ಸೋಲಿಸುವುದೇ ತಮ್ಮ ಗುರಿ ಎಂದು ಸ್ವಾಮೀಜಿಯವರು ರಣಕಹಳೆ ಮೊಳಗಿಸಿರುವುದರಿಂದ ಅವರ ಈ ಸಮರಕ್ಜೆ ಸಾಥ್ ನೀಡಿದಲ್ಲಿ ಕ್ಷೇತ್ರವನ್ನು ಬಿಜೆಪಿಯಿಂದ ತಪ್ಪಿಸಬಹುದೆಂಬುದು ಕೈ ನಾಯಕರ ಲೆಕ್ಜಾಚಾರವಾಗಿದೆ.
ಆದರೆ, ಈ ರೀತಿಯ ಸಾಧ್ಯತೆಗಳನ್ನು ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿರಾಕರಿಸಿದ್ದಾರೆ. ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಅವರು, ಧಾರವಾಡದಲ್ಲಿ ದಿಂಗಾಲೇಶ್ವರ ಸ್ವಾಮೀಜಿಗಳನ್ನು ನಾವು ಬೆಂಬಲಿಸುವುದಾದರೇ ನೇರವಾಗಿಯೇ ಬೆಂಬಲಿಸುತ್ತಿದ್ದೆವು, ಪರೋಕ್ಷವಾಗಿ ಯಾಕೆ ಬೆಂಬಲಿಸುತ್ತೇವೆ ಎಂದರು.. ನಾವು ಈಗಾಗಲೇ ಅಭ್ಯರ್ಥಿ ಘೋಷಣೆ ಮಾಡಿ ಬಿ ಫಾರಂ ನೀಡಿದ್ದೇವೆ. ಸ್ವಾಮೀಜಿಗಳು ಮುಂಚಿತವಾಗಿ ಈ ನಿರ್ಧಾರ ಮಾಡಿದ್ದರೆ ವಿಚಾರ ಬೇರೆ ಆಗುತ್ತಿತ್ತು ಎಂದರು.
ನಮ್ಮ ಅಭ್ಯರ್ಥಿ ಈಗಾಗಲೇ ಕೆಲಸ ಮಾಡುತ್ತಿದ್ದಾರೆ ಎಂದ ಡಿಕೆಶಿ, ನಮಗೆ ಶ್ರೀಗಳ ಬಗ್ಗೆ ಗೌರವವಿದೆ. ಅವರು ಸದಾ ಜಾತ್ಯಾತೀತ ತತ್ವದ ಮೇಲೆ ಕೆಲಸ ಮಾಡಿಕೊಂಡು ಬಂದಿದ್ದಾರೆ. ನಮ್ಮ ಅಭ್ಯರ್ಥಿ ಕೂಡ ಸೌಮ್ಯ ಸ್ವಭಾವದವರಾಗಿದ್ದಾರೆ ಎಂದರು.