ದೆಹಲಿಯ ತಬ್ಲಿಘಿಯ ಜಮಾತ್ ಮಸೀದಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರು ಪೈಕಿ ಬಹುತೇಕರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದರಿಂದ ದೇಶದಲ್ಲಿ ಆತಂಕ ಹೆಚ್ಚಾಗಿದೆ. ವಿದೇಶಿಯರು ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಸುಮಾರು 4 ಸಾವಿರವರೆಗೂ ಜನರು ಈ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಲಾಗಿದೆ. ಈಗ ಎಲ್ಲರನ್ನು ಹುಡುಕಿ, ಸಂಪರ್ಕಿಸಿ ಕ್ವಾರೆಂಟೈನ್‌ಗೆ ಒಳಪಡಿಸಲಾಗುತ್ತಿದೆ.
ದೆಹಲಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದವರ ಪೈಕಿ, ಕಳೆದ 2 ದಿನದಲ್ಲಿ ಒಟ್ಟು 647 ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಲುವ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ. ಭಾರತದಲ್ಲಿ ಇದುವರೆಗೂ 2031 ಪ್ರಕರಣಗಳು ದೃಢವಾಗಿದ್ದು, 56 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಇದರಲ್ಲಿ ನಿನ್ನೆಯಿಂದ ಇಂದಿನವರೆಗೂ 336 ಜನರಲ್ಲಿ ಪಾಸಿಟಿವ್ ಬಂದಿದೆ. ಮೃತಪಟ್ಟ 56 ಜನರ ಪೈಕಿ 12 ಜನರು ನಿನ್ನೆ ನಿಧನರಾಗಿದ್ದಾರೆ. ಒಟ್ಟು 157 ಜನರು ಕೊರೊನಾದಿಂದ ಚೇತರಿಕೆ ಕಂಡಿದ್ದಾರೆ.
ಅಂಡಮಾನ್ ಮತ್ತು ನಿಕೊಬಾರ್, ಅಸ್ಸಾಂ, ದೆಹಲಿ, ಹಿಮಾಚಲ ಪ್ರದೇಶ, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಝಾರ್ಕಂಡ್, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ದೆಹಲಿ ಸಭೆಯಲ್ಲಿ ಪಾಲ್ಗೊಂಡಿದ್ದವರಿಗೆ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.