ಮೈಸೂರು: ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಮಂಗಳವಾರ ರಾತ್ರಿ ನಗರಪ್ರದಕ್ಷಿಣೆ ನಡೆಸಿದರು.
ಕಾರ್ಪೋರೇಷನ್ ನಿಂದ ಪಾಲಿಕೆ ಬಸ್ ನಲ್ಲಿ ತೆರಳಿದ ಸಚಿವರು ನಗರದಲ್ಲಿ ಕೈಗೊಂಡಿರುವ ಸ್ವಚ್ಚತಾ ಕಾರ್ಯವನ್ನು ಪರಿಶೀಲಿಸಿದರು. ಸಯ್ಯಾಜಿರಾವ್ ರಸ್ತೆ ಮಾರ್ಗ ತೆರಳಿದರು. ಸರ್ಕಾರಿ ಆಯುರ್ವೇದಿಕ್ ಕಾಲೇಜ್ ಸರ್ಕಲ್ ನಲ್ಲಿ ಪೌರಕಾರ್ಮಿಕರೊಂದಿಗೆ ಮಾತುಕತೆ ನಡೆಸಿ ಕುಂದುಕೊರತೆಗಳನ್ನು ಆಲಿಸಿದರು. ದಸರಾ ಸಂದರ್ಭದಲ್ಲಿ ನಗರದ ಸ್ವಚ್ಛತೆ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಮಹತ್ವದಾಗಿದೆ ಎಂದು ಹೇಳಿದರು.
ಹೋಟೆಲ್ ಹೈವೇ ಸರ್ಕಲ್ ಬಳಿ ಪೌರ ಕಾರ್ಮಿಕರೊಂದಿಗೆ ಚಹಾ ಸೇವಿಸಿದರು. ಬಳಿಕ ಆಹಾರ ಮೇಳಕ್ಕೆ ಭೇಟಿ ನೀಡಿದರು. ಸಹಸ್ರಾರು ಸಂಖ್ಯೆಯಲ್ಲಿ ಜನರು ಆಗಮಿಸುವುದರಿಂದ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕಸ ವಿಲೇವಾರಿ ಸೂಕ್ತ ರೀತಿಯಲ್ಲಿ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ರಾತ್ರಿ 11 ಗಂಟೆಯಾದರೂ ಆಹಾರ ಮೇಳದಲ್ಲಿ ಜನದಟ್ಟಣೆ ಇತ್ತು. ಇಂದು ಸುಮಾರು 25 ಸಾವಿರಕ್ಕೂ ಅಧಿಕ ಮಂದಿ ಆಗಮಿಸಿದ್ದಾರೆ. ಕಸ ಸಾಗಾಟಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಮೈಸೂರು ಸ್ವಚ್ಛವಾಗಿಡಲು ಪೌರಕಾರ್ಮಿಕರು ಸಾಕಷ್ಟು ಮುತುವರ್ಜಿ ವಹಿಸಿ ಕೆಲಸ ಮಾಡುತ್ತಿದ್ದಾರೆ. ಪೌರ ಕಾರ್ಮಿಕರು ಬೆಳಗ್ಗೆ 3 ಗಂಟೆಯವರೆಗೆ ಸ್ವಚ್ಛತೆ ಕಾರ್ಯ ಮಾಡುತ್ತಿದ್ದಾರೆ. ಇಂದು ಪರಿಶೀಲನೆ ಮಾಡಿದ್ದೇವೆ. ಪೌರಕಾರ್ಮಿಕರ ಕಾರ್ಯ ಪ್ರಶಂಸನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಪಾಲಿಕೆ ಆಯುಕ್ತರಾದ ಲಕ್ಷ್ಮಿಕಾಂತ್ ರೆಡ್ಡಿ, ಮೇಯರ್ ಶಿವಕುಮಾರ್, ಮೂಡಾ ಮಾಜಿ ಅಧ್ಯಕ್ಷರಾದ ರಾಜೀವ್, ಜಂಗಲ್ಸ್ ಲಾಡ್ಜ್ಸ್ ಅಂಡ್ ರೆಸಾರ್ಟ್ಸ್ ಮಾಜಿ ಅಧ್ಯಕ್ಷರಾದ ಅಪ್ಪಣ್ಣ ಸೇರಿದಂತೆ ಹಲವರು ಜೊತೆಯಲ್ಲಿದ್ದರು.






















































