ಇಸ್ಲಾಮಾಬಾದ್: ತೋಷಖಾನಾ–2 ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿಗೆ ಪಾಕಿಸ್ತಾನ ನ್ಯಾಯಾಲಯ ಶನಿವಾರ ತಲಾ 17 ವರ್ಷಗಳ ಜೈಲು ಶಿಕ್ಷೆಯ ತೀರ್ಪು ಪ್ರಕಟಿಸಿದೆ.
ಮೇ 2021ರಲ್ಲಿ ಸೌದಿ ಅರೇಬಿಯಾದ ಕಿರೀಟ ರಾಜಕುಮಾರರಿಂದ ಅಧಿಕೃತ ಭೇಟಿಯ ಸಂದರ್ಭದಲ್ಲಿ ಉಡುಗೊರೆಯಾಗಿ ದೊರೆತ ದುಬಾರಿ ಆಭರಣ ಸೆಟ್ ಅನ್ನು ಅತಿ ಕಡಿಮೆ ಬೆಲೆಗೆ ಖರೀದಿಸಿದ ಆರೋಪ ಈ ಪ್ರಕರಣಕ್ಕೆ ಕಾರಣವಾಗಿದೆ.
ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ನಡೆಯುತ್ತಿರುವ ವಿಚಾರಣೆಯ ವೇಳೆ ಫೆಡರಲ್ ತನಿಖಾ ಸಂಸ್ಥೆ (ಎಫ್‌ಐಎ)ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶಾರುಖ್ ಅರ್ಜುಮಂದ್ ತೀರ್ಪು ಪ್ರಕಟಿಸಿದರು. ತೀರ್ಪಿನಂತೆ, ಪಾಕಿಸ್ತಾನ ದಂಡ ಸಂಹಿತೆಯ ವಿವಿಧ ವಿಧಿಗಳ ಅಡಿಯಲ್ಲಿ ಇಮ್ರಾನ್ ಖಾನ್ ಅವರಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಇದೇ ಶಿಕ್ಷೆಯನ್ನು ಬುಶ್ರಾ ಬೀಬಿಗೂ ವಿಧಿಸಲಾಗಿದೆ. ಇಬ್ಬರಿಗೂ ತಲಾ 16.4 ಮಿಲಿಯನ್ ಪಾಕಿಸ್ತಾನಿ ರೂ. ದಂಡ ವಿಧಿಸಲಾಗಿದ್ದು, ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಶಿಕ್ಷೆ ವಿಧಿಸುವ ವೇಳೆ ಇಮ್ರಾನ್ ಖಾನ್ ಅವರ ವಯಸ್ಸು ಹಾಗೂ ಬುಶ್ರಾ ಬೀಬಿ ಮಹಿಳೆಯಾಗಿರುವ ಅಂಶವನ್ನು ಪರಿಗಣಿಸಿ ಸೌಮ್ಯ ದೃಷ್ಟಿಕೋನ ಅನುಸರಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ ಎಂದು ಪಾಕಿಸ್ತಾನದ ಪ್ರಮುಖ ದಿನಪತ್ರಿಕೆ ಡಾನ್ ವರದಿ ಮಾಡಿದೆ.
ತೀರ್ಪಿನ ಬಳಿಕ, ಇಮ್ರಾನ್ ಖಾನ್ ಹಾಗೂ ಬುಶ್ರಾ ಬೀಬಿ ಅವರ ವಕೀಲರ ತಂಡಗಳು ಹೈಕೋರ್ಟ್‌ನಲ್ಲಿ ತೀರ್ಪು ಪ್ರಶ್ನಿಸುವುದಾಗಿ ಪ್ರಕಟಿಸಿವೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಇಬ್ಬರ ವಿರುದ್ಧ ಆರೋಪ ದಾಖಲಿಸಲಾಗಿದ್ದು, ಈ ವರ್ಷದ ಅಕ್ಟೋಬರ್‌ನಲ್ಲಿ ಆರೋಪಗಳನ್ನು ನಿರಾಕರಿಸಿದ್ದ ಅವರು, ಪ್ರಕರಣವನ್ನು ರಾಜಕೀಯ ಪ್ರೇರಿತ ಹಾಗೂ ಕಲ್ಪಿತ ಎಂದು ಕರೆದಿದ್ದರು.
ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದ ಇಮ್ರಾನ್ ಖಾನ್, ಈ ಪ್ರಕರಣ ದುರುದ್ದೇಶಪೂರಿತ ಹಾಗೂ ರಾಜಕೀಯವಾಗಿ ರೂಪಿಸಲಾಗಿದೆ ಎಂದು ಆರೋಪಿಸಿದ್ದರು. ಪ್ರಧಾನಿಯಾಗಿದ್ದ ಅವಧಿಯಲ್ಲಿ ಪತ್ನಿಗೆ ನೀಡಲಾದ ಉಡುಗೊರೆಯ ವಿವರಗಳ ಬಗ್ಗೆ ತಮಗೆ ಸಂಪೂರ್ಣ ಮಾಹಿತಿ ಇರಲಿಲ್ಲ ಎಂದು ಅವರು ವಾದಿಸಿದ್ದರು.
2018ರ ತೋಷಖಾನಾ ನೀತಿಯ ಪ್ರಕಾರವೇ ಎಲ್ಲಾ ಪ್ರಕ್ರಿಯೆಗಳನ್ನು ಅನುಸರಿಸಲಾಗಿದೆ. ಉಡುಗೊರೆಯನ್ನು ಪ್ರಧಾನಿ ಕಚೇರಿಯ ಶಿಷ್ಟಾಚಾರ ವಿಭಾಗಕ್ಕೆ ವರದಿ ಮಾಡಿ ಮೌಲ್ಯಮಾಪನದ ಬಳಿಕ ಖಜಾನೆಗೆ ಹಣ ಪಾವತಿಸಿ ಕಾನೂನುಬದ್ಧವಾಗಿ ಉಳಿಸಿಕೊಳ್ಳಲಾಗಿದೆ ಎಂದು ಇಮ್ರಾನ್ ಖಾನ್ ಪ್ರತಿಪಾದಿಸಿದ್ದರು.



















































