ನವದೆಹಲಿ: ಕೇಂದ್ರ ರೈಲ್ವೇ ಮತ್ತು ಜಲ ಶಕ್ತಿ ರಾಜ್ಯ ಸಚಿವ ವಿ ಸೋಮಣ್ಣ ನವರು ಕೇಂದ್ರ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ, ತುಮಕೂರು ಜಿಲ್ಲೆಯ ವಿವಿಧ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಬಗ್ಗೆ ಚರ್ಚಿಸಿದರು
ಈ ವೇಳೆ, ಸ್ಮಾರ್ಟ್ ಸಿಟಿ ತುಮಕೂರು ನಗರದ ಬೈಪಾಸ್ ನಿರ್ಮಾಣ ಹಂತ 02ರ ಮಲ್ಲಸಂದ್ರ (NH-73) ಯಿಂದ ವಸಂತನರಸಾಪುರ (NH-48) ದವರೆಗೆ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯ ಕಾರ್ಯಸಾಧ್ಯತೆಯನ್ನು (Alignment) ಮರುಪರಿಶೀಲಿಸಲು ಅಥವಾ ತಾಂತ್ರಿಕ ತಜ್ಞರ ತಂಡವನ್ನು ನಿಯೋಜಿಸಲು ಸಂಬಂಧಪಟ್ಟವರಿಗೆ ನಿರ್ದೇಶಿಸಲು ಸಚಿವರಲ್ಲಿ ಕೋರಲಾಯಿತು ಎಂದು ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ.
ತುಮಕೂರು – ಕೊರಟಗೆರೆ – ಮಧುಗಿರಿ – ಪಾವಗಡ – ರಾಯದುರ್ಗ – ಬಳ್ಳಾರಿ (225 ಕಿಮೀ) ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಅನುಮೋದನೆ ನೀಡಬೇಕೆಂದು ಮನವಿ ಮಾಡಿರುವುದಾಗಿ ವಿ ಸೋಮಣ್ಣ ಮಾಹಿತಿ ಹಂಚಿಕೊಂಡಿದ್ದಾರೆ.
288 ಕಿಮೀ. ಉದ್ದದ 13,139 ಕೋಟಿ ರೂ. ವೆಚ್ಚದ ಬೆಂಗಳೂರು ನಗರದ ಸಂಚಾರ ದಟ್ಟಣೆಯನ್ನು ನಿವಾರಿಸಲು ಭಾರತ್ ಮಾಲಾ ಯೋಜನೆಯಡಿ ನಿರ್ಮಿಸಲು ಉದ್ದೇಶಿಸಲಾದ ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR) ದಾಬಸ್‌ಪೇಟೆ-ದೊಡ್ಡಬಳ್ಳಾಪುರ – ಹೊಸಕೋಟೆ ಸಂಪರ್ಕಿಸುವ 143.172 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ. ಇನ್ನುಳಿದ ದಾಬಸ್ʼಪೇಟೆ – ಮಾಗಡಿ – ರಾಮನಗರ – ಕನಕಪುರ – ಮುದಗದಪಲ್ಲಿ ವಿಭಾಗವನ್ನು ಸಂಪರ್ಕಿಸುವ 144 ಕಿ.ಮೀ. ಉದ್ದದ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆಯನ್ನು ಅನುಮೋದಿಸಲಾಗಿದ್ದು, ಭೂಮಾಲೀಕರಿಗೆ ಪರಿಹಾರ ವಿತರಣೆ ಬಾಕಿ ಇದೆ. ಸುಮಾರು 150 ಹಳ್ಳಿಗಳ ವ್ಯಾಪ್ತಿಯ ಭೂಮಾಲೀಕರಿಗೆ ಪರಿಹಾರ ಬಿಡುಗಡೆ ಮಾಡಬೇಕು ಹಾಗೂ ಬಾಕಿ ಕಾಮಗಾರಿಯನ್ನು ಶೀಘ್ರವೇ ಆರಂಭಿಸಬೇಕೆಂದು ಮನವಿ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.