ಬೆಂಗಳೂರು: ಕಸ ವಿಲೇವಾರಿ ಗಾಡಿಗಳನ್ನು ಲ್ಯಾಂಡ್ ಫಿಲ್ ಗಳಿಗೆ ಬಿಡದಿದ್ದರೆ ಶಾಸಕರ ಮನೆಯ ಮುಂದೆ ಕಸ ಹಾಕುತ್ತೇವೆ ಎಂದು ಧಮ್ಕಿ ಹಾಕುತ್ತಿರುವ ಉಪ ಮುಖ್ಯಮಂತ್ರಿಗಳ ಹೇಳಿಕೆ ಅಪ್ರಬುದ್ಧ ಹಾಗೂ ಅವಿವೇಕತನದ ಪರಮಾವಧಿಯಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಕಸ ವಿಲೇವಾರಿ ಘಟಕಗಳು ಮಾನವ ವಾಸಸ್ಥಳಗಳಿಂದ ದೂರವಿರಬೇಕು. ಅವೈಜ್ಞಾನಿಕವಾಗಿ ಕಸ ಸುರಿಯುವುದರಿಂದ ಸುತ್ತ ಮುತ್ತ ಇರುವ ಗ್ರಾಮಸ್ಥರ ಹಾಗೂ ಜಾನುವಾರುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ಹಾಗೂ ಜಲ ಮೂಲಗಳು ಕಲುಷಿತಗೊಳ್ಳುತ್ತವೆ. ಈ ಕಾರಣಗಳನ್ನು ಇಟ್ಟು ಪ್ರತಿರೋಧ ಒಡ್ಡಿದ ಶಾಸಕರ ವಿರುದ್ಧ ಉಪ ಮುಖ್ಯಮಂತ್ರಿಗಳು ನಿಮ್ಮ ಮನೆಯ ಮುಂದೆ ಕಸ ಸುರೀತೀವಿ, ESMA ಜಾರಿ ಮಾಡುತ್ತೇವೆ ಎಂದು ಹೇಳುವುದು ತರವಲ್ಲ ಎಂದು ಯತ್ನಾಳ್ ಪ್ರತಿಕ್ರಿಯಿಸಿದ್ದಾರೆ.
ಇವರ ತರ್ಕಾನುಸಾರವೇ ಇವರ ಸ್ವಗೃಹದ ಮುಂದೆ ಹಾಗೂ ಕಾಂಗ್ರೆಸ್ ಕಚೇರಿಯ ಮುಂದೆ ಕಸ ಸುರಿದು ಮೇಲ್ಪಂಕ್ತಿ ಹಾಕಿಕೊಡಲಿ ಎಂದು ಡಿಕೆಶಿಗೆ ಯತ್ನಾಳ್ ಸವಾಲು ಹಾಕಿದ್ದಾರೆ.
ಪರಿಣತರೊಂದಿಗೆ, ತಜ್ಞರೊಂದಿಗೆ ಕೂತು ಚರ್ಚಿಸಿ, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆಯನ್ನು ಬಗೆಹರಿಸಬೇಕೇ ಹೊರತು ರೌಡಿ ಕೊತ್ವಾಲ್ ರಾಮಚಂದ್ರನಂತೆ ಫರ್ಮಾನು ಹೊರಡಿಸುವುದು ಸಭ್ಯತೆ ಹಾಗೂ ಸದಾಚಾರವಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.




























































