ಪಟ್ನಾ: ಲೋಕಸಭಾ ಚುನಾವಣಾ ಅಖಾಡ ಬಗೆಬಗೆಯ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತಿದೆ. ಅದರಲ್ಲೂ ಟಿಕೆಟ್‌ಗಾಗಿ ರಾಜಕೀಯ ನಾಯಕರು ಇನ್ನಿಲ್ಲದ ಸರ್ಕಸ್‌ನಲ್ಲಿ ತೊಡಗಿದ್ದಾರೆ. ಇದೇ ವೇಳೆ, ಬಿಹಾರದಲ್ಲಿ ಟಿಕೆಟ್‌ಗಾಗಿ ಕಿಡ್ನಿ ಪ್ರಕರಣ ಪ್ರತಿಧ್ದವನಿಸಿದೆ.
ಈ ಕುರಿತಂತೆ ಬಿಜೆಪಿ ನಾಯಕರು ಆರೋಪ ಮಾಡಿದ್ದಾರೆ. ಈ ಆರೋಪ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರತ್ತ ಕೇಂದ್ರೀಕರಿಸಿದೆ. ಲಾಲೂ ಪ್ರಸಾದ್ ಯಾದವ್ ಅವರು ಲೋಕಸಭೆ ಟಿಕೆಟ್‌ಗಳನ್ನು ಅಭ್ಯರ್ಥಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಸ್ವಂತ ಮಗಳನ್ನೂ ಬಿಡದೆ ಅವರಿಂದಲೂ ಮೊದಲು ಕಿಡ್ನಿ ಪಡೆದು ಬಳಿಕ ಆಕೆಯನ್ನು ಅಭ್ಯರ್ಥಿಯನ್ನಾಗಿ ಮಾಡಿ ದ್ದಾರೆ ಎಂದು ಬಿಜೆಪಿ ನಾಯಕ, ಡಿಸಿಎಂ ಸಮರ್ಥ ಚೌಧರಿ ಆರೋಪಿಸಿದ್ದಾರೆ.
ಪಟ್ನಾದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲಾಲೂ ಪ್ರಸಾದ್ ಯಾದವ್ ಅವರು ಮಗಳಿಂದ ಕಿಡ್ನಿ ಪಡೆದು ನಂತರ ಟಿಕೆಟ್ ನೀಡಿದ್ದಾರೆ ಎಂದಿದ್ದಾರೆ.
2022ರಲ್ಲಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಲಾಲೂಗೆ ಪುತ್ರಿ ರೋಹಿಣಿ ಕಿಡ್ನಿದಾನ ಮಾಡಿದ್ದರು ಎನ್ನಲಾಗಿದೆ.
ಚೌಧರಿ ಹೇಳಿಕೆ ಇದೀಗ ಬಿಹಾರ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಲಾಲೂ ಪುತ್ರಿ ರೋಹಿಣಿ, ಯಾವುದು ಸರಿ, ಯಾವುದು ತಪ್ಪು ಜನರು ನಿರ್ಧರಿಸುತ್ತಾರೆ ಎಂದಿದ್ದಾರೆ.