ಬೆಂಗಳೂರು: ಜೈನಮುನಿ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಪುನರುಚ್ಛರಿಸಿದ್ದಾರೆ.
ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ನಡೆದ ಜೈನಮುನಿ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂಬ ಬಿಜೆಪಿ ನಾಯಕರ ಆಗ್ರಹ ಕುರಿತಂತೆ ಪ್ರತಿಕ್ರಿಯಿಸಿರುವ ಪರಮೇಶ್ವರ್, ಈ ಪ್ರಕರಣದ ತನಿಖೆಯಲ್ಲಿ ನಮ್ಮ ಪೊಲೀಸರೇ ಸಮರ್ಥರಿದ್ದಾರೆ ಎಂದಿದ್ದಾರೆ.
ಜೈನಮುನಿ ಹತ್ಯೆ ಪ್ರಕರಣ ಬಗ್ಗೆ ಶೂನ್ಯ ವೇಳೆಯಲ್ಲಿ ಬಿಜೆಪಿ ಶಾಸಕರು ಸೋಮವಾರ ಪ್ರಸ್ತಾಪ ಮಾಡಿದ ಸಂದರ್ಭದಲ್ಲಿ ಸರ್ಕಾರದ ನಿಲುವನ್ನು ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು.
ಜೈನಮುನಿ ಕಾಮಕುಮಾರ ನಂದಿ ಅವರ ಹಿರೇಕೋಡಿ ಆಶ್ರಮಕ್ಕೆ 4 ಎಕರೆ ಜಮೀನು ಇದೆ. ಹತ್ಯೆ ಆರೋಪಿಗಳಾದ ನಾರಾಯಣ ಬಸಣ್ಣ ಮಾಳಿ, ಹಸನ್ ಸಾಬಾ ಮಕ್ಬೂಲ್ ದಲಾಯಿತಗೆ 6 ಲಕ್ಷ ರೂ. ಸಾಲ ನೀಡಿದ್ದು, ಅದನ್ನು ಮರಳಿಸುವಂತೆ ಕೇಳಿದ್ದರು. ಆ ಕಾರಣಕ್ಕಾಗಿ ಕೊಲೆ ನಡೆದಿದ್ದು, ಹಂತಕರು ಸ್ವಾಮೀಜಿಯ ದೇಹವನ್ನು ತುಂಡು ಮಾಡಿ ಕೊಳವೆ ಬಾವಿಯಲ್ಲಿ ಹಾಕಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಹೇಳಿದರು.