ಮಂಡ್ಯ: ಕೋಮುವಾದದ ವಿಷ ಬೀಜ ಬಿತ್ತಿ, ರಾಜಕೀಯ ಪ್ರಯೋಜನ ಪಡೆಯಲು ಹೊರಟ ಬಿಜೆಪಿ ಹಾಗೂ ಮಿತ್ರ ಪಕ್ಷಗಳ ಪ್ರಯತ್ನ ವಿಫಲವಾಗಲಿದೆ. ಇದು ಖಂಡಿತವಾಗಿಯೂ ಯಶ ಕಾಣದು. ಕಾಂಗ್ರೆಸ್‌ನ ಜನಪರ ಯೋಜನೆ, ಕಾಳಜಿ ಬಗ್ಗೆ ಜನರು ಈಗಾಗಲೇ ಅರ್ಥ ಮಾಡಿಕೊಂಡಿದ್ದಾರೆ. ಕೋಮುವಾದಕ್ಕೆ ನಮ್ಮ ಜನ ಸೊಪ್ಪು ಹಾಕುವುದಿಲ್ಲ ಎಂದು ಕೆಪಿಸಿಸಿ ಮಾಧ್ಯಮ ಘಟಕದ ಉಪಾಧ್ಯಕ್ಷರಾದ ಶಾಸಕರಾದ ದಿನೇಶ ಗೂಳಿಗೌಡ ಹೇಳಿದ್ದಾರೆ.
ಮಂಡ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ದಿನೇಶ್ ಗೂಳಿಗೌಡ, ಮಂಡ್ಯದ ಕೆರಗೋಡು ಗ್ರಾಮದಲ್ಲಿ ರಾಷ್ಟ್ರ ಧ್ವಜ, ಕನ್ನಡ ಧ್ವಜ ಹಾರಿಸಲು ಗ್ರಾಪಂನಿಂದ ಅನುಮತಿ ಪಡೆದು, ಆ ಧ್ವಜದ ಕಟ್ಟೆಯ ಮೇಲೆ ಕೇಸರಿ ಬಾವುಟ ಹಾಗೂ ಹನುಮ ಧ್ವಜ ಹಾರಿಸಲಾಗಿತ್ತು. ಜಿಲ್ಲಾಡಳಿತ ಆ ಧ್ವಜ ಇಳಿಸಿ ರಾಷ್ಟ್ರ ಧ್ವಜ ಹಾರಿಸಿದೆ. ಜಿಲ್ಲಾಡಳಿತ ಸಂವಿಧಾನದ ಆಶಯದಂತೆ ಕಾನೂನಾತ್ಮಕವಾಗಿ ನಡೆದುಕೊಂಡಿದೆ. ಆದರೆ, ಬಿಜೆಪಿ ಹಾಗೂ ಅದರ ಮಿತ್ರ ಪಕ್ಷ ಜೆಡಿಎಸ್ ಅದನ್ನು ಕೋಮುವಾದೀಕರಣಗೊಳಿಸಿ ರಾಜಕೀಯ ಪ್ರಯೋಜನ ಪಡೆಯಲು ಹೊರಟಿವೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.
ಮಂಡ್ಯ ಎಂಬುದು ಸ್ವಾತಂತ್ರ್ಯ ಹೋರಾಟದ ನೆಲೆಯಾಗಿದೆ. ಇಲ್ಲಿ ಅನೇಕ ಮಹನೀಯರು ಆಳಿದ್ದಾರೆ. ಹೋರಾಟದ ನಾಡು ನಮ್ಮದು ಎಂಬುದನ್ನು ಯಾರೂ ಸಹ ಮರೆಯಬಾರದು. ಎಚ್.ಕೆ.ವೀರಣ್ಣ ಗೌಡ್ರು, ಎಸ್.ಎಂ.ಕೃಷ್ಣಾ ಅವರು, ಕೆ.ವಿ.ಶಂಕರೇಗೌಡ್ರು, ಅಂಬರೀಶ್. ಚೌಡಯ್ಯ. ಎಸ್.ಡಿ.ಜಯರಾಂ ಅವರು, ಜಿ.ಮಾದೇಗೌಡರು ಸೇರಿದಂತೆ ಅನೇಕ ನಾಯಕರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಈ ನೆಲೆದಲ್ಲಿ ಮಾಡಿದ ಘಟಾನುಘಟಿ ನಾಯಕರ ತವರು ಜಿಲ್ಲೆ ಇದಾಗಿದೆ. ಈಗ ಇಂತಹ ನಾಡಿನಲ್ಲಿ ಬಿಜೆಪಿ ಮತ್ತು ಅವರ ಮಿತ್ರ ಪಕ್ಷ ಜೆಡಿಎಸ್ ಕೋಮುವಾದದ ವಿಷ ಬೀಜ ಬಿತ್ತಲು ಯತ್ನಿಸುತ್ತಿದೆ. ಅದು ಖಂಡಿತಾ ಯಶಸ್ವಿಯಾಗದು ಎಂದು ಶಾಸಕ ದಿನೇಶ್ ಗೂಳಿಗೌಡ ಹೇಳಿದರು.
ಮಂಡ್ಯದ ಜನ ಬಹಳ ಪ್ರಜ್ಞಾವಂತರಿದ್ದಾರೆ. ಇಲ್ಲಿ ಶೇ. 100ರಲ್ಲಿ 90 ರಷ್ಟು ರೈತರಿದ್ದಾರೆ. ಅವರನ್ನು ಕೆರಳಿಸಬೇಕು. ಕೋಮು ವಾತಾವರಣ ನಿರ್ಮಾಣ ಎಂದು ಬಿಜೆಪಿ ನಾಯಕರು ಪ್ರಚೋದನೆ ಮಾಡುತ್ತಿದ್ದಾರೆ. ಬಿಜೆಪಿ ಜನರ ಭಾವನೆಗಳ ಮೇಲೆ ರಾಜಕಾರಣ ಮಾಡಲು ಹೊರಟಿದೆ. ಕಾಂಗ್ರೆಸ್ ಜನರ ಬದುಕನ್ನು ಕಟ್ಟಲು ಹೊರಟಿದೆ. ಅದಕ್ಕಾಗಿಯೇ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ, ಯುವನಿಧಿಯಂಥ ಯೋಜನೆಯಿಂದ ಲಕ್ಷಾಂತರ ಬಡವರ ಬದುಕಿಗೆ ನೆರವಾಗುವುತ್ತಿದೆ. ಬರ ಇದ್ದರೂ ಜನ ನೆಮ್ಮದಿ ಬದುಕು ನಡೆಸುವಂತೆ ಮಾಡಿದೆ ಎಂದು ದಿನೇಶ್ ಗೂಳಿಗೌಡ ವಿವರಿಸಿದರು.
























































