ಚೆನ್ನೈ: ನಟ ವಿಜಯ್ ಅಭಿನಯದ ‘ಜನ ನಾಯಗನ್’ ಚಿತ್ರದ ನಿರ್ಮಾಪಕರಿಗೆ ಹಿನ್ನಡೆಯಾಗಿದ್ದು, ಚಿತ್ರಕ್ಕೆ ತಕ್ಷಣವೇ ಸೆನ್ಸಾರ್ ಪ್ರಮಾಣಪತ್ರ ನೀಡುವಂತೆ ಏಕಸದಸ್ಯ ನ್ಯಾಯಮೂರ್ತಿ ನೀಡಿದ್ದ ಆದೇಶವನ್ನು ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠ ರದ್ದುಗೊಳಿಸಿದೆ. ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಸಲ್ಲಿಸಿದ್ದ ಮೇಲ್ಮನವಿಯನ್ನು ಪೀಠ ಮಂಗಳವಾರ ಅಂಗೀಕರಿಸಿದೆ.
ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಹಾಗೂ ನ್ಯಾಯಮೂರ್ತಿ ಅರುಲ್ ಮುರುಗನ್ ಅವರನ್ನೊಳಗೊಂಡ ಪೀಠ, ಮಧ್ಯಂತರ ಹಂತದಲ್ಲೇ ಚಿತ್ರದ ವಿಷಯದ ಕುರಿತ ದೂರುಗಳ ಅರ್ಹತೆಯನ್ನು ಪರಿಶೀಲಿಸುವುದು ಕಾನೂನುಬದ್ಧವಲ್ಲ ಎಂದು ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ಏಕಸದಸ್ಯ ನ್ಯಾಯಮೂರ್ತಿ ಅನುಸರಿಸಿದ್ದ ವಿಧಾನ ದೋಷಪೂರಿತವಾಗಿದೆ ಎಂದು ಹೇಳಿ ಆದೇಶವನ್ನು ರದ್ದುಗೊಳಿಸಿ, ವಿಷಯವನ್ನು ಹೊಸದಾಗಿ ಪರಿಗಣಿಸಲು ಹಿಂತಿರುಗಿಸಲಾಗಿದೆ.
ಅರ್ಜಿಯನ್ನು ತಿದ್ದುಪಡಿ ಮಾಡಲು ನಿರ್ಮಾಪಕರಿಗೆ ನ್ಯಾಯಾಲಯ ಸ್ವಾತಂತ್ರ್ಯ ನೀಡಿದ್ದು, ಇದರ ಪರಿಣಾಮವಾಗಿ ಚಿತ್ರದ ಥಿಯೇಟರ್ ಬಿಡುಗಡೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರಕ್ಕೆ ಪ್ರತಿಕ್ರಿಯೆ ಸಲ್ಲಿಸಲು ಸಮರ್ಪಕ ಸಮಯ ನೀಡಲಾಗಿಲ್ಲ ಎಂಬ ಕಾರಣದಿಂದಲೇ ಜನವರಿ 9ರಂದು ಏಕಸದಸ್ಯರ ಆದೇಶಕ್ಕೆ ತಡೆ ನೀಡಲಾಗಿತ್ತು ಎಂದು ನ್ಯಾಯಪೀಠ ನೆನಪಿಸಿಕೊಂಡಿತು.
ರಾಜಕೀಯ ಪ್ರವೇಶಕ್ಕೂ ಮೊದಲು ವಿಜಯ್ ಅಭಿನಯದ ಕೊನೆಯ ಚಿತ್ರವೆಂದು ಹೇಳಲಾಗಿರುವ ‘ಜನ ನಾಯಗನ್’ ಪೊಂಗಲ್ ಹಬ್ಬದಂದು ಬಿಡುಗಡೆಯಾಗಬೇಕಿತ್ತು. ಎಲ್ಲಾ ಸೂಚನೆಗಳನ್ನು ಪಾಲಿಸಿದ್ದರೂ ಸಿಬಿಎಫ್‌ಸಿ ವಿಳಂಬ ಮಾಡಿದೆ ಎಂದು ಆರೋಪಿಸಿ ನಿರ್ಮಾಪಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ರಕ್ಷಣಾ ಪಡೆಗಳ ಚಿತ್ರಣ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುವ ಸಾಧ್ಯತೆ ಕುರಿತು ಬಂದ ದೂರಿನ ಹಿನ್ನೆಲೆಯಲ್ಲಿ ಚಿತ್ರವನ್ನು ಮರುಪರಿಶೀಲನೆಗೆ ಕಳುಹಿಸಲಾಗಿದ್ದು, ಅದೇ ವಿಚಾರ ಈಗ ಕಾನೂನು ವಿವಾದದ ಕೇಂದ್ರಬಿಂದುವಾಗಿದೆ.

























































