ಮಂಗಳೂರು: ಛತ್ತೀಸ್‌ಗಢದಲ್ಲಿ ಇತ್ತೀಚೆಗೆ ನಡೆದ ಕೋಮು ದಾಳಿ ಮತ್ತು ಇಬ್ಬರು ಕ್ರೈಸ್ತ ಧರ್ಮಭಗಿನಿಯರಾದ ಸಿಸ್ಟರ್ ವಂದನಾ ಫ್ರಾನ್ಸಿಸ್ ಮತ್ತು ಸಿಸ್ಟರ್ ಪ್ರೀತಿ ಮೇರಿಯ ಮೇಲೆ ಮಾನವ ಕಳ್ಳಸಾಗಣೆ ಮತ್ತು ಬಲವಂತದ ಧಾರ್ಮಿಕ ಮತಾಂತರದ ಆಧಾರರಹಿತ ಆರೋಪಗಳನ್ನು ಹೊರಿಸಿ ಕಾನೂನುಬಾಹಿರವಾಗಿ ಬಂಧಿಸಲಾಗಿದೆ ಎಂದು ಮಂಗಳೂರಿನ ಸಾಮಾಜಿಕ ಹೋರಾಟಗಾರ ಕ್ರಿಸ್ಟನ್ ಮಿನೇಜಸ್ ದೂರಿದ್ದಾರೆ.
ಕ್ರೈಸ್ತ ಸಮುದಾಯಕ್ಕೆ ಸೇರಿದ ವ್ಯಕ್ತಿಯಾಗಿ ನನಗೆ ತೀವ್ರ ಕೋಪ ಮತ್ತು ತೀವ್ರ ದುಃಖವನ್ನು ತಂದಿದೆ ಎಂದು ವಿದ್ಯಾರ್ಥಿ ನಾಯಕರೂ ಆದ ಕ್ರಿಸ್ಟನ್ ಮಿನೇಜಸ್ ಹೇಳಿದ್ದಾರೆ.
ಹಿಂದುಳಿದವರಿಗೆ, ದಲಿತರಿಗೆ, ಬಡವರಿಗೆ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ಶಿಕ್ಷಣ ನೀಡಿದ, ಆರೋಗ್ಯ ಮೂಲಸೌಕರ್ಯವನ್ನು ನಿರ್ಮಿಸಿದ ಅದೇ ಸಮುದಾಯಕ್ಕೆ ಅನ್ಯಾನ್ಯವಾದಾಗ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್‌ನ ಆದರ್ಶಗಳನ್ನು ಅನುಸರಿಸುವ ಬಿಜೆಪಿ ಪಕ್ಷವು ಆಳುವ ದೇಶದಲ್ಲಿ ಈ ರೀತಿಯ ಅಸಂವಿಧಾನಿಕ ಕೃತ್ಯಗಳು ನಡೆಯುವಂತಹದ್ದು ಹೊಸತೇನಲ್ಲ ಎಂದವರು ಪ್ರತಿಪಾದಿಸಿದ್ದಾರೆ.
ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿ ಎಷ್ಟರ ಮಟ್ಟಿಗೆ ಕುಸಿದಿದೆ ಎಂದರೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಅಧಿಕಾರಿಗಳ ಸಹಾಯದಿಂದ ಧಾರ್ಮಿಕ ಅಲ್ಪಸಂಖ್ಯಾತರನ್ನು ಬಹಿರಂಗವಾಗಿ ಬಲಪಂಥೀಯ ರೌಡಿ – ದುಷ್ಕರ್ಮಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಕ್ರಿಸ್ಟನ್ ಮಿನೇಜಸ್ ಆರೋಪಿಸಿದ್ದಾರೆ.
ಛತ್ತೀಸ್‌ಗಢ ಸರ್ಕಾರವು ಅಲ್ಪಸಂಖ್ಯಾತರೊಂದಿಗೆ ಸೂಕ್ತವಾಗಿ ವರ್ತಿಸಬೇಕೆಂದು ನಾನು ಎಚ್ಚರಿಸಲು ಬಯಸುತ್ತೇನೆ ಏಕೆಂದರೆ ಭಾರತವನ್ನು ನಿರ್ಮಿಸುವಲ್ಲಿ ಕ್ರೈಸ್ತರೂ ಪ್ರಮುಖರು ಎಂದಿರುವ ಅವರು, ಛತ್ತೀಸ್‌ಗಢ ಸರ್ಕಾರವು ಜಾತ್ಯತೀತತೆ ಮತ್ತು ಸಂವಿಧಾನದ ತತ್ವಗಳನ್ನು ಅನುಸರಿಸುವುದು ಕಷ್ಟಕರವಾಗಿದ್ದರೆ, ಅವರು ರಾಜೀನಾಮೆ ನೀಡಿ ಏನೂ ಮಾಡದೆ ಮನೆಯಲ್ಲಿ ಕುಳಿತುಕೊಳ್ಳುವುದು ಉತ್ತಮ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಈ ಅನ್ಯಾಯದ ವಿರುದ್ಧ ಕ್ರೈಸ್ತ ಸಮುದಾಯದ ನಾಯಕರು ಧ್ವನಿ ಎತ್ತಲು ವಿಫಲರಾಗಿದ್ದಾರೆ ಎಂಬುದು ವಿಷಾದಕರ. ಒಂದು ಕಾಲದಲ್ಲಿ ಧೈರ್ಯ ಶೌರ್ಯ, ಮತ್ತು ಸೇವೆಗೆ ಹೆಸರುವಾಸಿಯಾಗಿದ್ದ ಕ್ರೈಸ್ತ ಸಮುದಾಯಕ್ಕೆ ಸೇರಿರುವ ನಾಯಕರು, ನಮ್ಮ ಧಾರ್ಮಿಕ ನಾಯಕರ ಪರವಾಗಿ ಧ್ವನಿ ಎತ್ತಲು ಹಿಂಜರಿಯುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಕ್ರೈಸ್ತ ಸಮುದಾಯದ ನಾಯಕರು ಧ್ವನಿ ಎತ್ತಲು ಮತ್ತು ನ್ಯಾಯಕ್ಕಾಗಿ ಹೋರಾಡಲು ಅಸಮರ್ಥರಾಗಿದ್ದರೆ, ಅವರು ರಾಜೀನಾಮೆ ನೀಡಿ ಸಮುದಾಯದ ದೊಡ್ಡ ವೇದಿಕೆಗಳ ಮೇಲೆ ನಿಂತು ಭಾಷಣ ಕೊಡುವುದನ್ನು ನಿಲ್ಲಿಸಬೇಕು ಎಂದವರು ಹೇಳಿದ್ದಾರೆ.
ಇದೇ ವೇಳೆ ಅವರು ಸಮಾಜದ ಮುಂದಿಟ್ಟಿರುವ ಬೇಡಿಕೆಗಳು ಗಮನಸೆಳೆದಿವೆ
- ಅಮಾಯಕ ಕ್ರೈಸ್ತ ಧರ್ಮಭಗಿನಿ ಮತ್ತು ಮಕ್ಕಳನ್ನು ತಕ್ಷಣ ಬಿಡುಗಡೆ ಮಾಡಬೇಕು.
- ಸುಳ್ಳು ದೂರುಗಳು ಮತ್ತು ಆರೋಪಗಳನ್ನು ದಾಖಲಿಸಿದ ಮತ್ತು ಕೋಮು ದ್ವೇಷವನ್ನು ಪ್ರಚೋದಿಸಿದ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
- ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ವಿಫಲರಾದ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು.
ಈ ಬೇಡಿಕೆಗಳನ್ನು ಈಡೇರಿಸದಿದ್ದರೆ, ಬೀದಿಗಿಳಿದು ಬಹಿರಂಗ ಉಗ್ರ ಪ್ರತಿಭಟನೆಯ ಮೂಲಕ ನಮ್ಮ ಕೋಪವನ್ನ ವ್ಯಕ್ತ ಪಡಿಸುವುದು ಖಂಡಿತ ಎಂದು ಎಚ್ಚರಿಕೆಯ ಗಂಟೆಯನ್ನು ಬಿಜೆಪಿ ಆಡಳಿತದ ಛತ್ತೀಸ್‌ಗಢ ಸರ್ಕಾರಕ್ಕೆ ನೀಡುತ್ತಿರುವುದಾಗಿ ಕ್ರಿಸ್ಟನ್ ಮಿನೇಜಸ್ ಅವರು ಮಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.