ಬೆಂಗಳೂರು: ಚುನಾವಣೆ ಬಂದ ನಂತರ ಕಾಂಗ್ರೆಸ್ ಪಕ್ಷ ಲಿಂಗಾಯತರಿಗೆ ಬಹಳ ಪ್ರೀತಿ ತೋರಿಸುತ್ತಿದೆ. 5 ವರ್ಷ ಇರದ ಪ್ರೀತಿ ಈಗ ಉಕ್ಕಿದೆ. ಲಿಂಗಾಯತರನ್ನು ಒಡೆಯಲು, ಇಡೀ ಲಿಂಗಾಯತ ಸಮಾಜವನ್ನು ಛಿದ್ರ ಮಾಡಲು ಹೊರಟ ಕಾಂಗ್ರೆಸ್ಸಿನ ಕ್ರಮವನ್ನು ಯಾರೂ ಮರೆಯುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ
ಮುಧೋಳ ಹೆಲಿಪ್ಯಾಡ್‍ನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಲಿಂಗಾಯತ ಮತದಾರರು ಜಾಗೃತರಾಗಿದ್ದಾರೆ. ಅವರು ಸರಿಯಾದ ನಿರ್ಣಯವನ್ನೇ ತೆಗೆದುಕೊಂಡಿದ್ದಾರೆ. 2 ಎ ಮೀಸಲಾತಿ ಕೊಡುವುದಕ್ಕೆ ವಿರೋಧ ಮಾಡಿದವರು. 2009ರಲ್ಲಿ ಅದನ್ನು 2 ಎಗೆ ಸೇರಿಸಲು ವಿರೋಧಿಸಿದ್ದರು. 2016ರಲ್ಲಿ ಅದಕ್ಕೆ ಅವಕಾಶ ಕೊಡಲಿಲ್ಲ. ಈಗ ನಾವು ಹೆಚ್ಚಿಸಿದ ಬಳಿಕ ಪರೋಕ್ಷವಾಗಿ ಕುಮ್ಮಕ್ಕು ಕೊಟ್ಟು ಸುಪ್ರೀಂ ಕೋರ್ಟಿಗೆ ಕೇಸು ಹಾಕಿಸಿದ್ದಾರೆ ಎಂದು ಟೀಕಿಸಿದರು.
ಲಿಂಗಾಯತರ ಪ್ರತಿಯೊಂದು ಅಭಿವೃದ್ಧಿಯನ್ನೂ ವಿರೋಧಿಸಿದ್ದಾರೆ. ಸಿದ್ರಾಮಣ್ಣನ ಕಾಲದ ಜಿಲೇಬಿ ಫೈಲ್ ಮರೆಯಲು ಸಾಧ್ಯವೇ? ಎಂದು ಪ್ರಶ್ನಿಸಿದರು. ಈ ಭಾಗದ ಅತಿ ಹೆಚ್ಚು ಇರುವ ರೈತ ಸಮುದಾಯ ಕೃಷ್ಣ ಮೇಲ್ದಂಡೆ ಯೋಜನೆ ಮೇಲೆ ಅವಲಂಬಿತವಾಗಿದೆ. ಕೃಷ್ಣ ಮೇಲ್ದಂಡೆ ಯೋಜನೆಗೆ ಹಿನ್ನಡೆ ಮಾಡಿದ್ದರೆ ಅದು ಕಾಂಗ್ರೆಸ್ ಪಕ್ಷ ಎಂದು ಆರೋಪಿಸಿದರು.
ಒಂದೆಕರೆ ಭೂಮಿಗೂ ನೀರು ಕೊಡಲು ಆಗಲಿಲ್ಲ. ರಾಜಕೀಯ, ಸಾಮಾಜಿಕ, ಆರ್ಥಿಕ, ಆಡಳಿತದಲ್ಲಿ ಎಷ್ಟು ಪ್ರಾತಿನಿಧಿತ್ವ ನೀಡಿದ್ದೀರಿ? ಮಂತ್ರಿಮಂಡಲದಲ್ಲಿ ಎಷ್ಟು ಜನರಿದ್ದರು? ಎಷ್ಟು ಟಿಕೆಟ್ ಕೊಟ್ಟರು? ಅದೆಲ್ಲವನ್ನೂ ಜನರು ಗಮನಿಸುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ 1967ರ ನಂತರ ವೀರೇಂದ್ರ ಪಾಟೀಲ್ ಅವರ 9 ತಿಂಗಳು ಹೊರತುಪಡಿಸಿದರೆ 50 ವರ್ಷ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡಿಲ್ಲ ಎಂದು ಆಕ್ಷೇಪಿಸಿದರು.
ವೀರೇಂದ್ರ ಪಾಟೀಲರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಂಡರು. ಅವರು ಅನಾರೋಗ್ಯದಿಂದ ಹಾಸಿಗೆಯಲ್ಲಿದ್ದಾಗ ವಿಮಾನನಿಲ್ದಾಣದಲ್ಲಿ ಅವರನ್ನು ಕಿತ್ತು ಹಾಕಿದಿರಲ್ಲವೇ? ಏನು ನೈತಿಕತೆ ಇದೆ? ರಾಜಶೇಖರಮೂರ್ತಿ ಏನು ಕತೆ ಆಯ್ತು?- ಕಾಂಗ್ರೆಸ್ ಇತಿಹಾಸ ದೊಡ್ಡದಿದೆ ಎಂದು ಬಸವರಾಜ ಬೊಮ್ಮಾಯಿ ವಿವರಿಸಿದರು.
ಬಿ.ಎಸ್.ಪಾಟೀಲ ಸಾಸನೂರರನ್ನು ಹೇಗೆ ನಡೆಸಿಕೊಂಡರು? ಬಳಸಿ ಬಿಸಾಡಿದರು. ಈಗ ಎಸ್.ಆರ್.ಪಾಟೀಲರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದಾರೆ. ಅವರನ್ನು ವಿರೋಧ ಪಕ್ಷದ ನಾಯಕನ ಸ್ಥಾನದಿಂದ ತೆಗೆದರು. ಸಭಾಪತಿ ಆಗುವ ಅವಕಾಶದಿಂದ ತಡೆದರು. ಪ್ರತಿಯೊಂದು ಹಂತದಲ್ಲಿ ತಡೆದಿದ್ದಾರೆ. ಇದೆಲ್ಲವನ್ನೂ ಜನ ನೋಡುತ್ತಿದ್ದಾರೆ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕದ ಅಭಿವೃದ್ಧಿ ಆಗಿದ್ದು ಬಿಜೆಪಿಯಿಂದ. ಬಿಜೆಪಿ ಸಾಮಾಜಿಕವಾಗಿ ಎಲ್ಲರಿಗೂ ನ್ಯಾಯ ನೀಡಿದೆ. ಹೀಗಾಗಿ ಚುನಾವಣೆ ಸಂದರ್ಭದಲ್ಲಿ ಯಾರು ಆ ಕಡೆಯಿಂದ ಈ ಕಡೆ ಅಥವಾ ಈ ಕಡೆಯಿಂದ ಆ ಕಡೆ ಹೋದರೆ ಯಾವುದೇ ಪರಿಣಾಮ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಯಾವ ನಾಯಕರು ಬಿಟ್ಟು ಹೋಗಿದ್ದಾರೋ ಆ ಭಾಗದಲ್ಲಿ ಹೆಚ್ಚು ಸೀಟನ್ನು ಪಕ್ಷ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಮ್ಮ ಪಕ್ಷ ಕಪಿಮುಷ್ಟಿಯಲ್ಲಿಲ್ಲ. ನಮ್ಮದು ಪ್ರಜಾಪ್ರಭುತ್ವವಾದಿ ಪಕ್ಷ. ಮೋದಿಜಿ ಅವರಲ್ಲಿ ಅತ್ಯಂತ ಹೆಚ್ಚು ಪ್ರಜಾಪ್ರಭುತ್ವ ಗುಣಗಳಿವೆ ಎಂದು ಪ್ರಶ್ನೆಗೆ ಉತ್ತರಿಸಿದರು.
ರಾಜ್ಯಮಟ್ಟದಿಂದ ಜಗದೀಶ ಶೆಟ್ಟರ್ ಅವರ ಹೆಸರು ಕಳುಹಿಸಿದ್ದೆವು. ರಾಷ್ಟ್ರಮಟ್ಟದಲ್ಲಿ ಒಂದು ನೀತಿಯ ಮೇಲೆ ಅದನ್ನು ಮಾಡಿದ್ದಾರೆ. ಈಗಾಗಲೇ ಅದನ್ನು ಸಾಕಷ್ಟು ಬಾರಿ ಹೇಳಿದ್ದೇನೆ. ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಸೀಟು ಗಳಿಸಲು ಪಕ್ಷ ರೂಪುರೇಷೆಗಳನ್ನು ಮಾಡಿದೆ. ಪಕ್ಷ ಸನ್ನದ್ಧವಾಗಿದೆ. ಗೆದ್ದೇ ಗೆಲ್ಲುತ್ತೇವೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.
ನಾನು ಇವತ್ತು ಗೋವಿಂದ ಕಾರಜೋಳ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಬಂದಿದ್ದೆ. ಇದಾದ ಬಳಿಕ ಮುರುಗೇಶ ನಿರಾಣಿಯವರ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಲಿದ್ದೇನೆ ಎಂದು ತಿಳಿಸಿದರು. ಕರ್ನಾಟಕದ ನಮ್ಮ ಪಕ್ಷದ ಎಲ್ಲ ಅಭ್ಯರ್ಥಿಗಳ ಹೆಸರು ಘೋಷಣೆ ಆಗಿದೆ. ನಾಮಪತ್ರ ಸಲ್ಲಿಕೆಯೂ ನಡೆಯುತ್ತಿದೆ. ನಾಳೆ ಬಿಜೆಪಿಯ ಎಲ್ಲ ಅಭ್ಯರ್ಥಿಗಳೂ ನಾಮಪತ್ರ ಸಲ್ಲಿಸುತ್ತಾರೆ ಎಂದು ತಿಳಿಸಿದರು.