ಮೈಸೂರು: ವಿಧಾನಸಭಾ ಚುನಾವಣೆಗೆ ಜೆಡಿಎಸ್ ಪರಿಪೂರ್ಣ ತಯಾರಿಯಾಗಿದೆ ಎಂದಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಸಂಕ್ರಾಂತಿ ವೇಳೆಗೆ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಾವು ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದೇವೆ. ಅಮಿತ್ ಶಾ ಅವರ ಪಕ್ಷ ಪಟ್ಟಿ ಮಾಡಲು ಇನ್ನೂ ತಿಣುಕಾಡುತ್ತಿದೆ. ಸಂಕ್ರಾಂತಿ ನಂತರ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡುತ್ತೇನೆ ಎಂದರು.
ಬಸವರಾಜ ಬೊಮ್ಮಾಯಿ ಅವರು ಹೆಸರಿಗೆ ಮಾತ್ರ ಮುಖ್ಯಮಂತ್ರಿ, ಆದರೆ ಅಧಿಕಾರ ಚಲಾಯಿಸುವುದು ದೆಹಲಿ ಬಿಜೆಪಿ ಹೈಕಮಾಂಡ್. ಅವರು ಕೇವಲ ನಾಮಕಾವಸ್ತೆ ಸಿಎಂ ಎಂದು ಕುಟುಕಿದ ಮಾಜಿ ಮುಖ್ಯಮಂತ್ರಿ ಅವರು; ವೀರಶೈವ, ಒಕ್ಕಲಿಗ ಸಮಾಜಕ್ಕೆ ಮೀಸಲಾತಿಯ ಹೂ ಮುಡಿಸಿದ್ದಾರೆ ಬಿಜೆಪಿಯವರು. ಅದು ಮುಂದೆ ಬಿಜೆಪಿಗೆ ತಿರುಗುಬಾಣ ಆಗಲಿದೆ ಎಂದು ಅವರು ತಿಳಿಸಿದರು.
















































