ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಗ್ಯಾರಂಟಿಗಳಿಂದ ಕಾಂಗ್ರೆಸ್‌ಗೆ ಮತ ಬಂದಿಲ್ಲ. ಸರ್ಕಾರ ಪಾಪರ್ ಆಗಿ ಅಭಿವೃದ್ಧಿ ಶೂನ್ಯವಾಗಿರುವುದರಿಂದಲೇ ಕಾಂಗ್ರೆಸ್ ಸೋತಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ದಲಿತರ ಹಣ ಲೂಟಿ ಹೊಡೆದು, ಶೂನ್ಯ ಸಾಧನೆ ಮಾಡಿ, ಜನರ ಪಾಲಿಗೆ ಸತ್ತುಹೋಗಿದೆ. ಒಬ್ಬ ಸಚಿವರೂ ಮಳೆ ಹಾನಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿಲ್ಲ. ಲೋಕಸಭೆ ಚುನಾವಣೆಯಲ್ಲಿ ಸಚಿವರಿರುವ ಕಡೆ ಹಿನ್ನೆಡೆಯಾಗಿದ್ದು, ಸ್ಥಾನ ಕಳೆದುಕೊಳ್ಳುವ ಆತಂಕವಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಕನಕಪುರದಲ್ಲಿ ಹೀನಾಯವಾಗಿ ಸೋತಿದ್ದಾರೆ. ರಾಜ್ಯದಲ್ಲಿ ಸರ್ಕಾರವಿದ್ದು, ಏಕೆ ಸೋತಿದ್ದೀರಿ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ದಲಿತರ 187 ಕೋಟಿ ರೂ. ಲೂಟಿ ಮಾಡಿದ್ದರಿಂದಲೇ ಇವರು ಸೋತಿದ್ದಾರೆ ಎಂದು ಕಾಂಗ್ರೆಸ್ ಹೈಕಮಾಂಡ್‌ಗೆ ತಿಳಿದುಬಂದಿದೆ. ಲೋಕಸಭೆ ಚುನಾವಣೆಯ ಫಲಿತಾಂಶದಿಂದ ಸರ್ಕಾರ ಮೂಲೆ ಸೇರಿದೆ ಎಂದರು.
ಈಗಾಗಲೇ ತೆರಿಗೆ ಭಾರದಿಂದ ಜನರು ಸುಸ್ತಾಗಿದ್ದಾರೆ. ಕಸಕ್ಕೂ ತೆರಿಗೆ ಹಾಕುವುದನ್ನು ಬಿಜೆಪಿ ತೀವ್ರವಾಗಿ ವಿರೋಧಿಸುತ್ತದೆ. ಮುಂದೆ ಹಾಲು, ಆಲ್ಕೋಹಾಲ್, ಬಸ್ ಟಿಕೆಟ್ ದರವನ್ನೂ ಹೆಚ್ಚಿಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ. ಸಿಎಂ ಸಿದ್ದರಾಮಯ್ಯ ಇನ್ನಷ್ಟು ಹೊಸ ತೆರಿಗೆಗಳನ್ನು ವಿಧಿಸಲಿದ್ದಾರೆ. ಇದರ ವಿರುದ್ಧವೂ ಬಿಜೆಪಿ ಪ್ರತಿಭಟಿಸಲಿದೆ. ಅಲ್ಪಸಂಖ್ಯಾತರು ಏನು ಮಾಡಿದರೂ ನಡೆಯುತ್ತದೆ ಎಂಬ ನಂಬಿಕೆ ಬಂದಿದೆ. ಹಿಂದೂಗಳ ಮೇಲೆ ಹಲ್ಲೆಗಳು ಹೆಚ್ಚಾಗುತ್ತಿದೆ ಹಾಗೂ ಮಾಫಿಯಾ ರೌಡಿಗಳಿಗೆ ಭಯ ಕಡಿಮೆಯಾಗಿದೆ. ಗೃಹ ಇಲಾಖೆ ದಿಕ್ಕು ದೆಸೆಯಿಲ್ಲದಂತೆ ನಡೆಯುತ್ತಿದೆ. ಜನರು ತಮ್ಮನ್ನು ತಾವೇ ರಕ್ಷಣೆ ಮಾಡಿಕೊಳ್ಳುವ ಸ್ಥಿತಿ ಬಂದಿದೆ ಎಂದರು.