ಬೆಂಗಳೂರು,ಅ.09: ಆರ್ಥಿಕ ನೀತಿಯನ್ನು ವಿರೋಧಿಸಿ ಗಾಂಧಿಭವನದ ಬಳಿ ಹಿರಿಯ ರಂಗಕರ್ಮಿ ಪ್ರಸನ್ನ ಅಮರಣಾಂತ ಉಪವಾಸ ಕೈಗೊಂಡು ಧರಣಿ ಕುಳಿತಿದ್ದಾರೆ. ಧರಣಿ ಸ್ಥಳಕ್ಕೆ ರಾಜ್ಯ ಸಭಾ ಸದಸ್ಯ ಎಲ್.ಹನುಮಂತಯ್ಯ, ವೈ.ಎಸ್.ವಿ.ದತ್ತಾ,ಮೋಹನ್ ಕೊಂಡಜ್ಜಿ ಭೇಟಿ ನೀಡಿ ಧರಣಿಗೆ ಸಾಥ್ ನೀಡಿದ್ದಾರೆ. ಅಲ್ಲದೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಪ್ರತಿಭಟನಾಕಾರರನ್ನು ಭೇಟಿ ಮಾಡಿದ್ದಾರೆ.
ನಂತರ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗಾಂಧಿಯವರ ನಂತರ ನಮ್ಮಲ್ಲಿ ಹೋರಾಟಗಾರರೇ ಇಲ್ಲ. ಪ್ರಜಾಪ್ರಭುತ್ವದಲ್ಲಿ ನಿಮ್ಮ ಹೋರಾಟ ಬೇಕಿದೆ. ಇದೀಗ ಅನಿರ್ಧಿಷ್ಟಾವಧಿ ಧರಣಿ ಮುಂದುವರಿಸಿದ್ದೀರ. ಇಂತ ಹೋರಾಟ ಇಂದು ಅನಿವಾರ್ಯ. ನೀವು ಇನ್ನೂ ಹೆಚ್ಚು ದಿನಗಳ ಕಾಲ ಆರೋಗ್ಯವಾಗಿರಬೇಕು. ಶುಗರ್ ಲೆವೆಲ್ ಕೂಡ ಪ್ರಮುಖವಾಗಿರಬೇಕು.ಆರೋಗ್ಯದ ದೃಷ್ಟಿಯಿಂದ ನೀವು ಉಪವಾಸ ಸತ್ಯಾಗ್ರಹವನ್ನ ಕೈಬಿಡಿ. ವೈದ್ಯರ ಸಲಹೆಯಂತೆ ನೀವು ನಡೆದುಕೊಳ್ಳಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಪ್ರಸನ್ನ ನಾಲ್ಕೈದು ದಿನದಿಂದ ಧರಣಿ ನಡೆಸ್ತಿರೋದರಿಂದ ಅವರ ಆರೋಗ್ಯ ಕ್ಷೀಣಿಸುತ್ತಿದೆ. ವೈದ್ಯರಿಂದ ಪದೇ ಪದೇ ಚಿಕಿತ್ಸೆ ಕೊಡಿಸಬೇಕಾಗಿದೆ. ಇಷ್ಟಾದರೂ ಸರ್ಕಾರ ಇತ್ತ ತಿರುಗಿಯೂ ನೋಡಿಲ್ಲ. ಇಂತ ಸರ್ಕಾರವನ್ನ ನಾವು ಎಂದೂ ಕಂಡಿಲ್ಲ ಎಂದು ಸರ್ಕಾರದ ವಿರುದ್ಧ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಕಿಡಿ ಕಾರಿದ್ದಾರೆ.


























































