ಬೆಂಗಳೂರು: ಕೋವಿಡ್ ವರದಿಯನ್ನು ಸದನದಲ್ಲಿ ಬಿಡುಗಡೆ ಮಾಡಲಿ ಎಂದು ರಾಜ್ಯ ಸರ್ಕಾರಕ್ಕೆವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಟಾಂಗ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರ್ಕಾರದ ಕಾರ್ಯವೈಖರಿ ಬಗ್ಗೆ ಕಿಡಿ ಕಾರಿದರು.
ಅಬಕಾರಿ ಇಲಾಖೆಯಲ್ಲಿ ಹಗರಣ ಹಾಗೂ ವಕ್ಫ್ ಭೂ ಕಬಳಿಕೆ ಮುಂದುವರಿದಿದೆ. ಅಬಕಾರಿ ಇಲಾಖೆಯ ಹಗರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತಾಡಿದ್ದಾರೆ. ಇದನ್ನು ಸಿಬಿಐ ತನಿಖೆಗೆ ವಹಿಸುವುದು ಸೂಕ್ತ. ಕೋವಿಡ್ ತನಿಖೆಯ ಭಾಗ 1 ಮಾತ್ರ ಬಂದಿದೆ. ನ್ಯಾ.ಕೆಂಪಣ್ಣ ಆಯೋಗದ ಭಾಗ 1 ಕೂಡ ಬಂದಿಲ್ಲ. ಅದರ ವರದಿ ಸಂಪೂರ್ಣವಾಗಿ ಹೊರಬರಲಿ ಎಂದರು.
ಕೋವಿಡ್ ಇಡೀ ಜಗತ್ತಿನಲ್ಲಿತ್ತು. ಆಗ ಯಾವ ಸರಕು ಯಾವ ದರದಲ್ಲಿತ್ತು ಎಂಬುದನ್ನು ಮೊದಲು ತಿಳಿಸಲಿ. ಎಲ್ಲ ರಾಜ್ಯದಲ್ಲಿ ಕಿಟ್‌ಗಳನ್ನು ಎಷ್ಟು ದರಕ್ಕೆ ಖರೀದಿ ಮಾಡಲಾಗಿದೆ ಎಂದು ತಿಳಿಸಲಿ. ತುರ್ತು ಖರೀದಿ ಮಾಡದೆ 60 ದಿನಗಳ ಟೆಂಡರ್‌ಗೆ ಕಾದುಕೊಂಡು ಕೂತಿದ್ದರೆ ಎಲ್ಲವೂ ಮುಗಿದು ಹೋಗುತ್ತಿತ್ತು. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನೆ ಮಾಡಬೇಕು. ಕೋವಿಡ್‌ನ ಪೂರ್ಣ ವರದಿಯನ್ನು ಸದನದಲ್ಲಿ ಬಿಡುಗಡೆ ಮಾಡಲಿ ಎಂದರು.
ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಈಗಾಗಲೇ ಗೆದ್ದಿದ್ದಾರೆ. ಸಚಿವ ಜಮೀರ್ ಅಹ್ಮದ್ ಕರಿಯ ಎಂದು ಹೀಯಾಳಿಸಿದ್ದು, ದೇವೇಗೌಡರ ಕುಟುಂಬ ಖರೀದಿಸುತ್ತೇನೆಂದು ಹೇಳಿದ್ದು, ಮೊದಲಾದ ಹೇಳಿಕೆಗಳಿಂದಾಗಿ ಜನರು ಕಾಂಗ್ರೆಸ್‌ಗೆ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ. ವಕ್ಫ್, ಮುಡಾ, ವಾಲ್ಮೀಕಿ ನಿಗಮದ ಹಗರಣ ಚುನಾವಣೆಯಲ್ಲಿ ಪ್ರಭಾವ ಬೀರಿದೆ ಎಂದರು.