ಕೊರೋನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಸಹ ದೇಶ ರಕ್ಷಣೆ ಮಾಡುವ ಸೈನಿಕರಿಗೆ ಸಮಾನವಾಗಿದ್ದು, ಒಂದು ವೇಳೆ ಕೊವಿಡ್-19 ವಿರುದ್ಧದ ಹೋರಾಟದಲ್ಲಿ ಸೋಂಕು ತಗುಲಿ ಯಾವುದೇ ವೈದ್ಯ ಅಥವಾ ಆರೋಗ್ಯ ಕಾರ್ಯಕರ್ತರು ಮೃತಪಟ್ಟರೆ ಅವರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬುಧವಾರ ಘೋಷಿಸಿದ್ದಾರೆ.
ಯುದ್ಧದ ವೇಳೆ ಸೈನಿಕರು ತಮ್ಮ ಜೀವ ಪಣಕ್ಕಿಟ್ಟು ಹೋರಾಡುತ್ತಾರೆ. ಇಂದು ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರು ಅವರಂತೆ ತಮ್ಮ ಜೀವ ಪಣಕ್ಕಿಟ್ಟು ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಹೀಗಾಗಿ ನೀವು ಸಹ ಸೈನಿಕರಿಗಿಂತ ಯಾವುದೇ ಕಮ್ಮಿ ಇಲ್ಲ ಎಂದು ಆರೋಗ್ಯ ಕಾರ್ಯಕರ್ತರಿಗೆ ದೆಹಲಿ ಸಿಎಂ ಧೈರ್ಯ ತುಂಬಿದ್ದಾರೆ. ದೆಹಲಿ ಸರ್ಕಾರ ಈ ಮುಂಚೆ ಹುತಾತ್ಮ ಯೋಧರಿಗೆ 1 ಕೋಟಿ ರೂಪಾಯಿ ಪರಿಹಾರ ಘೋಷಿಸಿತ್ತು. ಈಗ ಕೊವಿಡ್-19 ವಿರುದ್ಧದ ಹೋರಾಟದಲ್ಲಿ ದುರಾದೃಷ್ಟವಶಾತ್ ಯಾವುದೇ ಆರೋಗ್ಯ ಕಾರ್ಯಕರ್ತ, ವೈದ್ಯ, ನೈರ್ಮಲ್ಯ ಕಾರ್ಮಿಕರು ಅಥವಾ ನರ್ಸ್ ಗಳು ಮೃತಪಟ್ಟರೆ ಅವರ ಕುಟುಂಬಕ್ಕೆ ತಲಾ 1 ಕೋಟಿ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.