ಬೆಂಗಳೂರು: ರಾಜ್ಯ ಸರ್ಕಾರ ಕೇಳಿದಷ್ಟು ಬರ ಪರಿಹಾರ ಬಿಡುಗಡೆ ಮಾಡದ ಕೇಂದ್ರ ಸರ್ಕಾರದ ವಿರುದ್ದ ಭಾನುವಾರ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೂ ಆದ ಡಿ.ಕೆ.ಶಿವಕುಮಾರ್, ನಾಳಿನ ಪ್ರತಿಭಟನೆ ಬಗ್ಗೆ ಮಾಹಿತಿ ನೀಡಿದರು.
ಕೇಂದ್ರ ಸರ್ಕಾರ ಕರ್ನಾಟಕ ಕೇಳಿರುವ ಪರಿಹಾರ ಮೊತ್ತದಲ್ಲಿ ಅತ್ಯಂತ ಕಡಿಮೆ ಪ್ರಮಾಣವನ್ನು ಪರಿಹಾರವಾಗಿ ಘೋಷಿಸಿದೆ. ಇದು ಆನೆಗೆ ಮೂರು ಕಾಸಿನ ಮಜ್ಜಿಗೆ ಕೊಟ್ಟಂತಾಗಿದೆ. ಹೀಗಾಗಿ ನಾಳೆ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ನಮ್ಮ ನಾಯಕರೊಂದಿಗೆ ಪ್ರತಿಭಟನೆ ಮಾಡಲಾಗುವುದು. ಇನ್ನು ನಮ್ಮ ರಾಜ್ಯಕ್ಕೆ ಬರಬೇಕಾದ ಪರಿಹಾರ ಮೊತ್ತ ಪಡೆಯಲು ಕಾನೂನು ಹೋರಾಟ ಮುಂದುವರಿಸುತ್ತೇವೆ ಎಂದು ತಿಳಿಸಿದರು.
ಖಂಡಿತಾ ಕಾನೂನು ಮುಂದುವರಿಯುತ್ತದೆ. ನಾವು ಭಿಕ್ಷೆ ಕೇಳುತ್ತಿಲ್ಲ. ಇದು ನಮ್ಮ ಹಕ್ಕು, ಅದನ್ನು ಕೇಳುತ್ತಿದ್ದೇವೆ. ಇದನ್ನು ನೀಡುವುದು ಕೇಂದ್ರದ ಕರ್ತವ್ಯ. ನ್ಯಾಯಾಲಯ ಹಾಗೂ ಜನರ ಮುಂದೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಡಿಕೆಶಿ ತಿಳಿಸಿದರು.