ನವದೆಹಲಿ: ಕಳೆದ 11 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬಜೆಟ್‌ಗಳು ಕೇವಲ ಅಂಕಿ-ಅಂಶಗಳ ದಾಖಲೆಗಳಾಗಿ ಉಳಿಯದೆ, ಆರ್ಥಿಕ ಪರಿವರ್ತನೆ ಮತ್ತು ನೀತಿ ಸುಧಾರಣೆಯ ಪ್ರಮುಖ ಸಾಧನಗಳಾಗಿ ರೂಪುಗೊಂಡಿವೆ. MSMEಗಳು, ನವೋದ್ಯಮಗಳು ಮತ್ತು ಕೈಗಾರಿಕೆಗಳಿಗೆ ವ್ಯವಹಾರ ಸುಲಭಗೊಳಿಸುವ ಜೊತೆಗೆ, ಸಾಮಾನ್ಯ ಜನರ ಖರೀದಿ ಶಕ್ತಿಯನ್ನು ಹೆಚ್ಚಿಸುವುದರ ಮೇಲೆ ಬಜೆಟ್‌ಗಳು ನಿರಂತರ ಒತ್ತು ನೀಡಿವೆ.
2014-15ರ ಮೊದಲ ಕೇಂದ್ರ ಬಜೆಟ್‌ನಲ್ಲಿ ವೈಯಕ್ತಿಕ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ರೂ.2 ಲಕ್ಷದಿಂದ ರೂ.2.5 ಲಕ್ಷಕ್ಕೆ (ಹಿರಿಯ ನಾಗರಿಕರಿಗೆ ರೂ.3 ಲಕ್ಷಕ್ಕೆ) ಹೆಚ್ಚಿಸಲಾಗಿತ್ತು. ಜೊತೆಗೆ ಸೆಕ್ಷನ್ 80C ಅಡಿಯಲ್ಲಿ ಹೂಡಿಕೆ ಮಿತಿಯನ್ನು ರೂ.1 ಲಕ್ಷದಿಂದ ರೂ.1.5 ಲಕ್ಷಕ್ಕೆ ಏರಿಸಲಾಯಿತು. ಜಾಗತಿಕ ಬಂಡವಾಳ ಆಕರ್ಷಣೆ ಮತ್ತು ಮೂಲಸೌಕರ್ಯ ಆಧುನೀಕರಣದ ಉದ್ದೇಶದಿಂದ ರಕ್ಷಣಾ ಹಾಗೂ ವಿಮಾ ವಲಯಗಳಲ್ಲಿ ಎಫ್‌ಡಿಐ ಮಿತಿಯನ್ನು ಶೇ.26ರಿಂದ ಶೇ.49ಕ್ಕೆ ಹೆಚ್ಚಿಸುವ ಮಹತ್ವದ ನಿರ್ಧಾರವೂ ಕೈಗೊಳ್ಳಲಾಯಿತು.
ನಗರಾಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ 100 ಸ್ಮಾರ್ಟ್ ಸಿಟಿಗಳ ಅಭಿವೃದ್ಧಿಗೆ ಆರಂಭಿಕವಾಗಿ ರೂ.7,060 ಕೋಟಿ ಹಂಚಿಕೆ ಮಾಡಲಾಗಿದ್ದು, ಗ್ರಾಮೀಣ ಸಂಪರ್ಕ ಬಲಪಡಿಸಲು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗೆ ಒತ್ತು ನೀಡಲಾಯಿತು. ಹೊಸ ವಿಮಾನ ನಿಲ್ದಾಣಗಳ ಅಭಿವೃದ್ಧಿ ಹಾಗೂ ಪಿಪಿಪಿ ಮಾದರಿಗಳ ವ್ಯಾಪಕ ಬಳಕೆಯ ಪ್ರಸ್ತಾವನೆಯೂ ಬಜೆಟ್‌ನ ಭಾಗವಾಗಿತ್ತು.
2025-26ರ ಕೇಂದ್ರ ಬಜೆಟ್‌ಗೆ ಬಂದಾಗ, ಸರ್ಕಾರ ತನ್ನ ಹಿಂದಿನ ಭರವಸೆಗಳನ್ನು ಈಡೇರಿಸುವ ಜೊತೆಗೆ ಸುಧಾರಣೆಗಳನ್ನು ಮತ್ತಷ್ಟು ಗಟ್ಟಿಗೊಳಿಸಿರುವುದು ಸ್ಪಷ್ಟವಾಗುತ್ತದೆ. ಆರು ದಶಕಗಳಷ್ಟು ಹಳೆಯದಾದ ನೇರ ತೆರಿಗೆ ವ್ಯವಸ್ಥೆಯನ್ನು ಬದಲಿಸುವ ಆದಾಯ ತೆರಿಗೆ ಮಸೂದೆ–2025, ಹೂಡಿಕೆದಾರರ ವಿಶ್ವಾಸ, ತೆರಿಗೆದಾರರ ಪರಿಹಾರ ಮತ್ತು ಆಡಳಿತಾತ್ಮಕ ದಕ್ಷತೆಗಳ ನಡುವೆ ಸಮತೋಲನ ಸಾಧಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಕಾರ್ಪೊರೇಟ್ ತೆರಿಗೆಯಲ್ಲಿ ನಿರ್ದಿಷ್ಟ ವಿನಾಯಿತಿಗಳನ್ನು ಬಳಸಿಕೊಳ್ಳದ ಕಂಪನಿಗಳಿಗೆ ಶೇ.22ರ ದರ ಮತ್ತು ಹೊಸ ಉತ್ಪಾದನಾ ಕಂಪನಿಗಳಿಗೆ ನಿರ್ದಿಷ್ಟ ಅವಧಿಗೆ ಶೇ.15ರ ತೆರಿಗೆ ದರವನ್ನು ನಿಗದಿಪಡಿಸಲಾಗಿದೆ. ವೈಯಕ್ತಿಕ ತೆರಿಗೆಯ ಹೊಸ ಪದ್ಧತಿಯಲ್ಲಿ ಉದಾರ ಸ್ಲ್ಯಾಬ್‌ಗಳು ಮತ್ತು ಹೆಚ್ಚಿದ ರಿಯಾಯಿತಿಗಳೊಂದಿಗೆ ಕಡಿಮೆ ದರಗಳನ್ನು ಒದಗಿಸಲಾಗಿದೆ. ಇದರ ಪರಿಣಾಮವಾಗಿ ರೂ.12 ಲಕ್ಷದವರೆಗೆ (ಸಂಬಳದಾರರಿಗೆ ಪ್ರಮಾಣಿತ ಕಡಿತ ಸೇರಿಸಿ ರೂ.12.75 ಲಕ್ಷ) ಆದಾಯ ಹೊಂದಿರುವವರು ತೆರಿಗೆ ಪಾವತಿಯಿಂದ ಮುಕ್ತರಾಗಲಿದ್ದು, ಮಧ್ಯಮ ವರ್ಗದ ಕುಟುಂಬಗಳ ಉಳಿತಾಯ ಮತ್ತು ಖರ್ಚು ಸಾಮರ್ಥ್ಯ ಹೆಚ್ಚಲಿದೆ.
ಕೃಷಿ ಕ್ಷೇತ್ರದಲ್ಲೂ ಮಹತ್ವದ ಘೋಷಣೆಗಳಾಗಿದ್ದು, 100 ಕಡಿಮೆ ಉತ್ಪಾದಕ ಜಿಲ್ಲೆಗಳನ್ನು ಒಳಗೊಂಡ ಪ್ರಧಾನಮಂತ್ರಿ ಧನ್-ಧಾನ್ಯ ಕೃಷಿ ಯೋಜನೆಯಿಂದ 1.7 ಕೋಟಿ ರೈತರು ಲಾಭ ಪಡೆಯಲಿದ್ದಾರೆ. ದ್ವಿದಳ ಧಾನ್ಯಗಳಲ್ಲಿ ಆತ್ಮನಿರ್ಭರ ಮಿಷನ್, ರೂ.5 ಲಕ್ಷದವರೆಗೆ ಹೆಚ್ಚಿಸಿದ ಕೆಸಿಸಿ ಸಾಲ, MSMEಗಳಿಗೆ ಕ್ರೆಡಿಟ್ ಗ್ಯಾರಂಟಿ ಮಿತಿಯನ್ನು ರೂ.5 ಕೋಟಿಯಿಂದ ರೂ.10 ಕೋಟಿಗೆ ದ್ವಿಗುಣಗೊಳಿಸುವ ಕ್ರಮಗಳು ಉದ್ಯೋಗ ಮತ್ತು ಉತ್ಪಾದನೆಯನ್ನು ಉತ್ತೇಜಿಸುವ ಗುರಿ ಹೊಂದಿವೆ.
ಇದಲ್ಲದೆ, ಖಾಸಗಿ ಆರ್&ಡಿಗೆ ರೂ.20,000 ಕೋಟಿ, ನ್ಯೂಕ್ಲಿಯರ್ ಎಸ್‌ಎಂಆರ್ ಮಿಷನ್‌ಗೆ ರೂ.500 ಕೋಟಿ ಹಾಗೂ ತಂತ್ರಜ್ಞಾನ ನಾಯಕತ್ವ ನಿರ್ಮಾಣಕ್ಕಾಗಿ 50,000 ಅಟಲ್ ಟಿಂಕರಿಂಗ್ ಲ್ಯಾಬ್‌ಗಳ ಘೋಷಣೆಗಳು ಬಜೆಟ್‌ನ ಪ್ರಮುಖ ಆಕರ್ಷಣೆಗಳಾಗಿವೆ. 2026ರ ಹಣಕಾಸು ವರ್ಷದಲ್ಲಿ ಹಣಕಾಸು ಕೊರತೆಯನ್ನು ಶೇ.4.4ಕ್ಕೆ ಇಳಿಸುವ ಗುರಿ, ವಿಮಾ ವಲಯದಲ್ಲಿ ಎಫ್‌ಡಿಐ ಮಿತಿಯನ್ನು ಶೇ.100ಕ್ಕೆ ಹೆಚ್ಚಿಸುವ ನಿರ್ಧಾರ ಮತ್ತು ಜನ್ ವಿಶ್ವಾಸ್ 2.0 ಮೂಲಕ ಕಾನೂನುಗಳನ್ನು ಅಪರಾಧ ಮುಕ್ತಗೊಳಿಸುವ ಕ್ರಮಗಳು 2047ರ ‘ವಿಕ್ಷಿತ್ ಭಾರತ್’ ಕನಸಿನತ್ತ ಸರ್ಕಾರದ ಸುಧಾರಣಾ ಪಯಣವನ್ನು ಸ್ಪಷ್ಟಪಡಿಸುತ್ತವೆ.
























































