ಬೆಂಗಳೂರು: ಕಾಂಗ್ರೆಸ್ ಪಕ್ಷದ್ದು ಓಲೈಕೆ ರಾಜಕಾರಣ, ಜೆಡಿಎಸ್ ಪಕ್ಷದ್ದು ಕುಟುಂಬ ರಾಜಕಾರಣ ಎಂದು ಬಿಜೆಪಿ ಮಾಡಿರುವ ಟ್ವೀಟ್ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಜನತಾ ಪರ್ವ 1.0 ಎರಡನೇ ಹಂತದ ಕಾರ್ಯಗಾರ ‘ಜನತಾ ಸಂಗಮ’ದ ವೇಳೆ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದ್ದು ಕುಟುಂಬ ರಾಜಕಾರಣವಾದರೆ ಬಿಜೆಪಿಯವರದ್ದು ಯಾವ ರಾಜಕಾರಣ? ಶಾಸಕ ಅಪ್ಪಚ್ಚು ರಂಜನ್ ಸಹೋದರ ಎಂಎಲ್ಸಿ, ಜಗದೀಶ್ ಶೆಟ್ಟರ್ ತಮ್ಮ ಕೂಡ ಎಂಎಲ್ಸಿ, ಉದಾಸಿ ಕುಟುಂಬದ ಕಥೆ ಏನು? ಕುಟುಂಬ ರಾಜಕಾರಣ ಅಲ್ಲಿಯೂ ಇಲ್ಲವೇ? ಎಂದು ಪ್ರಶ್ನೆ ಮಾಡಿದರು.
ಪಕ್ಷಕ್ಕೆ ಬಂದು ಜನರಿಂದ ಗೆದ್ದವರನ್ನು ಹಣ ಕೊಟ್ಟು ಖರೀದಿ ಮಾಡಿದ್ದು ಯಾವ ಪಕ್ಷ? ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಾಗದೆ ಅನ್ಯ ಪಕ್ಷಗಳಿಂದ ಶಾಸಕರನ್ನು ಸೆಳೆದವರು ಯಾರು? ನಿಮ್ಮ ಸರಕಾರಗಳು ಹೇಗೆ ಬಂದವು ಎನ್ನುವುದನ್ನು ನೀವು ಅರ್ಥ ಮಾಡಿಕೊಂಡು ಮಾತನಾಡಬೇಕು ಎಂದು ಅವರು ಹೇಳಿದರು.
ಪಕ್ಷಕ್ಕೆ ಬಂದವರು ನಂಬಿಕೆ ದ್ರೋಹ ಮಾಡಿ ಹೋದರೆ ಪಕ್ಷವನ್ನು ಉಳಿಸಿಕೊಳ್ಳಲು ನಾವೇನು ಮಾಡಬೇಕು? ಕೆಲವೊಮ್ಮೆ ಇಂಥ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಬಿಜೆಪಿಯವರು ಕ್ಷುಲ್ಲಕ ವಿಚಾರ ಮಾತನಾಡುವುದು ಬೇಡ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.