ಬೆಂಗಳೂರು: ಸಿಎಂ ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳಲು ಸಮಾವೇಶ ನಡೆಸುತ್ತಿದ್ದಾರೆ. ಸಾಧನಾ ಸಮಾವೇಶ ಆದ ನಂತರ ಇದು ಸಿಎಂ ಅಳಿವು-ಉಳಿವಿನ ಸಮಾವೇಶವಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರಂಭದಿಂದಲೂ ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ಹೇಳುತ್ತಲೇ ಇದ್ದಿದ್ದರಿಂದ ಯಾವಾಗಲೂ ಸರ್ಕಾರವನ್ನು ಅಸ್ಥಿರತೆ ಕಾಡುತ್ತಿದೆ. ಈ ಸಮಾವೇಶದಿಂದ ಜನರಿಗೆ ಯಾವುದೇ ಉಪಯೋಗವಿಲ್ಲ. ವಾಲ್ಮೀಕಿ ನಿಗಮದಲ್ಲಿ ಹಗರಣ, 2,500 ರೈತರ ಆತ್ಮಹತ್ಯೆ 1200 ನವಜಾತ ಶಿಶುಗಳ ಸಾವು, ಬಾಣಂತಿಯರ ಸಾವು, ಹತ್ತಕ್ಕೂ ಅಧಿಕ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಆತ್ಮಹತ್ಯೆ, ಆರ್‌ಸಿಬಿ ಸಂಭ್ರಮಾಚರಣೆ ವೇಳೆ 11 ಸಾವು, ಇಂತಹ ಘಟನೆಗಳನ್ನು ಸಂಭ್ರಮಿಸಲು ಸಮಾವೇಶ ಮಾಡಲಾಗುತ್ತಿದೆಯೇ ಎಂದು ಪ್ರಶ್ನಿಸಿದರು.
ಆರ್‌ಸಿಬಿ ಕಾರ್ಯಕ್ರಮ ಸರ್ಕಾರದ ವತಿಯಿಂದ ನಡೆದಿಲ್ಲ ಎಂದು ಬಿಂಬಿಸಲಾಗುತ್ತಿದೆ. ಆದರೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಈ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿದ್ದರು. ಸಿಐಡಿ ಹಾಗೂ ನ್ಯಾ.ಡಿಕುನ್ಹ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ ಸರ್ಕಾರದ ಪಾತ್ರದ ಬಗ್ಗೆ ಹೇಳದೆ, ಪೊಲೀಸರ ಮೇಲೆ ಆರೋಪ ಮಾಡಲಾಗಿದೆ. ಪೊಲೀಸರಿಗೆ ಆದೇಶ ಕೊಟ್ಟ ಸರ್ಕಾರದ ತಪ್ಪಿನ ಬಗ್ಗೆ ಎಲ್ಲೂ ಹೇಳಿಲ್ಲ. ಇಂತಹ ಸಮಯದಲ್ಲಿ ಸಮಾವೇಶ ನಡೆಸಲಾಗುತ್ತಿದೆ. ಇದೇ ರೀತಿ ಡಿ.ಕೆ.ಶಿವಕುಮಾರ್ ಕನಕಪುರದಲ್ಲಿ ಸಮಾವೇಶ ನಡೆಸಿದರೆ ಆಗ ಯಾರ ಬಲ ಹೆಚ್ಚಿದೆ ಎಂದು ತೀರ್ಮಾನಿಸಬಹುದು. ಇಲ್ಲಿ ಪರಸ್ಪರ ಸ್ಪರ್ಧೆ ನಡೆಯುತ್ತಿದೆ ಎಂದರು.
ತನಿಖಾ ಆಯೋಗಗಳನ್ನು ನೇಮಕ ಮಾಡುವಾಗ ಪದೇ ಪದೆ ಇಬ್ಬರನ್ನೇ ನೇಮಕ ಮಾಡಲಾಗುತ್ತದೆ. ಇದರಿಂದಾಗಿ ಜನರಿಗೆ ಸರ್ಕಾರದ ಮೇಲೆ ನಂಬಿಕೆ ಹೋಗಿದೆ. ವಿರೋಧ ಪಕ್ಷದ ಶಾಸಕರಾದ ಬೈರತಿ ಬಸವರಾಜ್ ಅವರನ್ನು ಬಗ್ಗುಬಡಿಯಲು ಪೊಲೀಸರೇ ಎಫ್‌ಐಆರ್‌ನಲ್ಲಿ ಅವರ ಹೆಸರು ಬರೆದಿದ್ದಾರೆ. ದೂರು ಕೊಟ್ಟ ಮಹಿಳೆಯೇ ಮುಂದೆ ಬಂದು ಶಾಸಕರ ಹೆಸರನ್ನು ಹೇಳಿಲ್ಲ ಎಂದಿದ್ದಾರೆ. ಆದರೂ ಸರ್ಕಾರದ ದ್ವೇಷ ಸಾಧಿಸುತ್ತಿದೆ ಎಂದರು.