ಹಾವೇರಿ: ಹೊಸ ಕಾರ್ ಖರೀದಿ ಮಾಡಿದ ಗ್ರಾಹಕರಿಂದ ಕಾರಿನ ನೋಂದಣಿ ಶುಲ್ಕ ಪಡೆದು, ಸಕಾಲಕ್ಕೆ ಕಾರ್ ನೋಂದಣಿ ಮಾಡಿಸದೇ ಪೊಲೀಸ್ ದಂಡಕ್ಕೆ ಕಾರಣವಾದ ಹಾವೇರಿ ರೇವಣಕರ ಮೋಟರ್ಸ್ ಪ್ರೈ.ಲಿ. ಸಂಸ್ಥೆಗೆ ಕಾರ್ ನೋಂದಣಿಗೆ ವಸೂಲಿ ಮಾಡಿದ ಹಣಕ್ಕೆ ಶೇ.6ರ ಬಡ್ಡಿ ಹಾಗೂ ಪೊಲೀಸ್‍ರಿಗೆ ಗ್ರಾಹಕರು ಕಟ್ಟಿದ ದಂಡದ ಹಣ ಪಾವತಿಸುವ ಜೊತೆಗೆ ತ್ವರಿತವಾಗಿ ಕಾರ್ ನೋಂದಣಿ ಮಾಡಿಸಿಕೊಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿದೆ.
ಹಾವೇರಿ ನಗರದ ಬಸವೇಶ ಫಕ್ಕೀರಪ್ಪ ಹುಲ್ಲೂರ ಅವರು ನಗರದ ರೇವಣಕರ ಮೋಟರ್ಸ್ ಪ್ರೈ.ಲಿ.ನ ಶೋರೂಂನಲ್ಲಿ 2022ರ ಮೇ 3ರಂದು ಮಾರುತಿ ಸ್ವಿಫ್ಟ ವಾಹನ ಖರೀದಿಸಿ ನೋಂದಣಿ ಶುಲ್ಕ, ರಸ್ತೆ ತೆರಿಗೆ, ವಾಹನದ ಬಾಬ್ತು ಸೇರಿದಂತೆ ರೂ.8,27,000ಗಳನ್ನು ಪಾವತಿಸಿದ್ದರು. 2022 ಜೂನ್ 01ರ ಗಡುವಿನೊಳಗೆ ವಾಹನ ನೋಂದಣಿ ಮಾಡಿಸಬೇಕಾದ ಶೋರೂಂ ಮಾಲೀಕರು ಗಡುವು ಮೀರಿದರೂ ವಾಹನ ನೋಂದಣಿ ಮಾಡಿಸದ ಕಾರಣ ಹುಬ್ಬಳ್ಳಿಗೆ ಹೋಗುವ ಮಾರ್ಗದಲ್ಲಿ ಪೊಲೀಸರು ತಪಾಸಣೆ ನಡೆಸಿ ನೋಂದಣಿ ದಾಖಲೆ ಇಲ್ಲದ ಕಾರಣ ವಾಹನ ಮಾಲೀಕರಿಗೆ ದಂಡಹಾಕಿದ್ದರು. ದಂಡಪಾವತಿಮಾಡಿ ನೋಂದಣಿಗೊಳ್ಳದ ವಾಹನದ ಬದಲು ಅವರು ಬಾಡಿಗೆ ವಾಹನದಲ್ಲಿ ತೆರಳಿದ್ದರು. ಈ ಸಂಬಂಧ ರೇವಣಕರ ಮೋಟರ್ಸ್ ವಿರುದ್ಧ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು.
ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷರಾದ ಈಶ್ವರಪ್ಪ ಬಿ.ಎಸ್ ಹಾಗೂ ಮಹಿಳಾ ಸದಸ್ಯರಾದ ಉಮಾದೇವಿ. ಎಸ್. ಹಿರೇಮಠ ನೇತೃತ್ವದ ತಂಡ, ಕಾರಿನ ನೋಂದಣಿ ಮಾಡಿಸಬೇಕು ಹಾಗೂ ಕಾರಿನ ನೋಂದಣಿಗೆ ಪಾವತಿಸಿದ ನೋಂದಣಿ ಶುಲ್ಕ 1,08,800ಕ್ಕೆ ವಾರ್ಷಿಕ 6ರಂತೆ ಬಡ್ಡಿ ಹಣವನ್ನು ಕಾರು ಖರೀದಿ ಮಾಡಿದ ದಿನಾಂಕದಿಂಂದ ಕಾರಿನ ನೋಂದಣಿಯಾಗುವವರೆಗೆ ಪಾವತಿಸಬೇಕು. ಹುಬ್ಬಳ್ಳಿ ಸಂಚಾರಿ ಪೊಲೀಸ್‍ಠಾಣೆಗೆ ಪಾವತಿಸಿದ ದಂಡದ ಹಣ 500 ರೂಪಾಯಿ ಹಾಗೂ ಪ್ರಯಾಣದ ವೆಚ್ಚಕ್ಕಾಗಿ 15,000 ರೂಪಾಯಿ, ಮಾಸಿಕ ಹಾಗೂ ದೈಹಿಕ ವ್ಯಥೆಗೆ ನಾಲ್ಕು ಸಾವಿರ ಮತ್ತು ಪ್ರಕರಣದ ವೆಚ್ಚ 2 ಸಾವಿರ ರೂಪಾಯಿಗಳನ್ನು 30 ದಿನದೊಳಗಾಗಿ ಪಾವತಿಸಲು ಆದೇಶಿಸಿದೆ. ತಪ್ಪಿದಲ್ಲಿ ಪರಿಹಾರದ ಮೊತ್ತಕ್ಕೆ ವಾರ್ಷಿಕ ಶೇ.9 ರಂತೆ ಬಡ್ಡಿ ಸಮೇತ ಪಾವತಿಸಬೇಕು ಎಂದು ಹಾವೇರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿದೆ.