ಮೈಸೂರು: ಮೇಕೆದಾಟು ವಿಷಯ ಇಟ್ಟುಕೊಂಡು ಕಾಂಗ್ರೆಸ್ ಪಕ್ಷ ಕೈಗೊಂಡಿರುವ ಪಾದಯಾತ್ರೆ ಕೇವಲ ಪೊಲಿಟಿಕಲ್ ಗಿಮಿಕ್ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ವಿರುದ್ಧ ಕಟು ಟೀಕಾ ಪ್ರಹಾರ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ನೀರಾವರಿ ವಿಷಯದಲ್ಲಿ ಆದಿಯಿಂದ ಕಾಂಗ್ರೆಸ್ ಪಕ್ಷವು ರಾಜ್ಯಕ್ಕೆ ಅನ್ಯಾಯ ಮಾಡುತ್ತಲೇ ಬಂದಿದೆ. ರಾಷ್ಟ್ರೀಯ ಪಕ್ಷವಾದ್ದರಿಂದ ಕಾಂಗ್ರೆಸ್ ಎಂದೂ ಕಾವೇರಿ ವಿಷಯದಲ್ಲಿ ರಾಜ್ಯದ ಪರ ನಿಲ್ಲಲೇ ಇಲ್ಲ ಎಂದು ಕೆಲ ಉದಾಹರಣೆಗಳ ಸಮೇತ ಕೈ ಪಕ್ಷದ ಬಣ್ಣ ಬಯಲು ಮಾಡಿದರು.
ಕಾಂಗ್ರೆಸ್ʼನವರು ಮಾಡುವ ಪಾದಯಾತ್ರೆಗೆ ನಾನೇಕೆ ಹತಾಶನಾಗಲಿ? ನಾನು ರಾಜ್ಯದ ಜನತೆಯ ಮುಂದೆ ಇಟ್ಟಿರುವ ವಿಷಯಗಳ ಬಗ್ಗೆ ಕಾಂಗ್ರೆಸ್ ನಾಯಕರು ಮಾತನಾಡಲಿ. ಇವತ್ತು ಟ್ವೀಟ್ʼನಲ್ಲಿ ನಾನು ಪ್ರಸ್ತಾಪ ಮಾಡಿರುವ ಅಂಶಗಳ ಬಗ್ಗೆ ಅವರು ಉತ್ತರ ಕೊಡಲಿ. ಅದರ ಹೊರತಾಗಿ ಯೋಜನೆಯ ಕ್ರೆಡಿಟ್ ಪಡೆಯುವ ಅಗತ್ಯ ನನಗಿಲ್ಲ. ದೇವೇಗೌಡರು ರಾಜ್ಯಕ್ಕಾಗಿ ಎಷ್ಟೆಲ್ಲಾ ಮಾಡಿದ್ದಾರೆ, ಅವರು ಎಂದಾದರೂ ಕ್ರೆಡಿಟ್ ಕ್ಲೈಮ್ ಮಾಡಿದ್ದಾರಾ? ಎಂದು ಹೆಚ್ಡಿಕೆ ಪ್ರಶ್ನಿಸಿದರು.
ಕಾವೇರಿ ನೀರಿನ ಹೋರಾಟಕ್ಕೆ ಕಾಂಗ್ರೆಸ್ ಕೊಡುಗೆ ಏನು? ಇವರು ಮೇಕೆದಾಟು ಯೋಜನೆಯನ್ನು ಕಾರ್ಯಗತ ಮಾಡಿಸಲು ಈ ಪಾದಯಾತ್ರೆ ಮಾಡುತ್ತಿದ್ದರೋ ಅಥವಾ ಈ ಪಾದಯಾತ್ರೆ ಮೂಲಕ ಪ್ರಚಾರ ಪಡೆಯಲಿಕ್ಕೆ ಪ್ರಯತ್ನ ಮಾಡುತ್ತಿದ್ದಾರೋ? ಎನ್ನುವುದು ಪ್ರಶ್ನೆ ಎಂದ ಅವರು, ದೆಹಲಿಯಲ್ಲಿ ಕಾಂಗ್ರೆಸ್ ಸರಕಾರ ಇತ್ತು. ರಾಜ್ಯದಲ್ಲಿ ವೀರಪ್ಪ ಮೊಯಿಲಿ ಅವರ ಕಾಂಗ್ರೆಸ್ ಸರಕಾರ ಇತ್ತು. ಬೆಂಗಳೂರಿಗೆ ಕುಡಿಯುವ ನೀರಿನ ಅಗತ್ಯದ ಬಗ್ಗೆ ಇವರು ಕಳಿಸಿದ್ದ ಪ್ರಸ್ತಾವನೆಯನ್ನು ದಿಲ್ಲಿ ಕಾಂಗ್ರೆಸ್ ಸರಕಾರ ತಿರಸ್ಕರಿಸಿತ್ತು. ಆಮೇಲೆ ದೇವೇಗೌಡರು ಸಿಎಂ ಅದ ಮೇಲೆ ರಾಜಧಾನಿಗೆ ದಕ್ಕಬೇಕಿದ್ದ 9 ಟಿಎಂಸಿ ನೀರು ಬಳಕೆ ಮಾಡಿಕೊಳ್ಳುವ ಬಗ್ಗೆ ಕಳಿಸಿದ್ದ ರಾಜ್ಯದ ಮನವಿಯನ್ನೂ ಪಿ.ವಿ.ನರಸಿಂಹ ರಾವ್ ಸರಕಾರ ವಾಪಸ್ ಕಳಿಸಿತ್ತು. ಆಗ ತಮಿಳುನಾಡು ಒತ್ತಡಕ್ಕೆ ಮಣಿದು ರಾಜ್ಯಕ್ಕೆ ಕೇಂದ್ರವು ಅನ್ಯಾಯ ಮಾಡಿತ್ತು. ಬಳಿಕ ಅದೇ ತಮಿಳುನಾಡಿನ ಡಿಎಂಕೆ ಪಕ್ಷದ 39 ಸಂಸದರ ಬೆಂಬಲದಿಂದ ದೇವೇಗೌಡರು ಪ್ರಧಾನಿ ಅದರು. ಅಂತಹ ಸಂದರ್ಭದಲ್ಲಿಯೇ ಆ ಸಂಸದರನ್ನು ಒಪ್ಪಿಸಿ ಬೆಂಗಳೂರಿಗೆ 9 ಟಿಎಂಸಿ ನೀರು ತಂದವರು ದೇವೇಗೌಡರು. ಕಾವೇರಿ ಟ್ರಿಬ್ಯೂನಲ್ ರಚನೆ ಆಗಿದ್ದು ವೀರೇಂದ್ರ ಪಾಟೀಲರು ಸಿಎಂ ಆಗಿದ್ದಾಗ. ಆಗ ದೇವೇಗೌಡರು ಸೋತಿದ್ದರು. ಆಗ ಸದನದಲ್ಲಿ ಕಾವೇರಿ ಬಗ್ಗೆ ಮಾತನಾಡುವವರು ಸಿಕ್ಕಿರಲಿಲ್ಲ. ಅವರು ನೀರು ಕೇಳಿಕೊಂಡು ಬಂದ ತಮಿಳುನಾಡು ನೀರಾವರಿ ಸಚಿವರನ್ನು ನಮ್ಮ ಮುಖ್ಯಮಂತ್ರಿ ಹಾಗೂ ನೀರಾವರಿ ಮಂತ್ರಿ ಮಾತನಾಡಲಿಲ್ಲ. ಆ ರಾಜ್ಯದವರು ಕೊನೆಗೆ ಟ್ರಿಬ್ಯೂನಲ್ ರಚನೆಗೆ ಒತ್ತಾಯಿಸಿ ಕೇಂದ್ರದ್ದ ವಿಪಿ ಸಿಂಗ್ ಸರಕಾರಕ್ಕೆ ಮನವಿ ಮಾಡಿದರು. ಕಾಂಗ್ರೆಸ್ ಬೆಂಬಲದಿಂದ ಸರಕಾರ ಮಾಡಿದ್ದ ವಿ.ಪಿ.ಸಿಂಗ್ ಅವರು ತಮಿಳುನಾಡು ಒತ್ತಡಕ್ಕೆ ಮಣಿದರು. ಆಗ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದ ರಾಮಕೃಷ್ಣ ಹೆಗಡೆ ಅವರೂ ಒಳಗೊಂಡಂತೆ ಎಲ್ಲರೂ ಸೇರಿ ಟ್ರಿಬ್ಯೂನಲ್ ರಚನೆಗೆ ಕಾರಣರಾದರು. ಆಗ ಕಾಂಗ್ರೆಸ್ ಮಾಡಿದ್ದು ಏನು? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರು ಭಾನುವಾರದಂದು ಕಾವೇರಿ ಇತಿಹಾಸದ ಅರಿವು ಇಲ್ಲದೆ ಒಂದು ಟ್ವೀಟ್ ಮಾಡಿದ್ದಾರೆ. 1968ರಲ್ಲೇ ಕಾಂಗ್ರೆಸ್ ನವರು ಮೇಕೆದಾಟು ಯೋಜನೆ ಮಾಡೋಕೆ ಹೋಗಿದ್ದರಂತೆ. ಆಗ ಯಾವುದೋ ಕೋರ್ಟ್ ವ್ಯಾಜ್ಯ ಇತ್ತಂತೆ, ಅದಕ್ಕೆ ಯೋಜನೆ ನಿಂತು ಹೋಯಿತಂತೆ. ಸಿದ್ದರಾಮಯ್ಯ ಅವರು ಆ ಎಲ್ಲ ವಿವರಗಳನ್ನು ಜನರ ಮುಂದೆ ಇಡಬೇಕು ಎನುವುದು ನನ್ನ ಒತ್ತಾಯ ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು.
1962ರಲ್ಲಿ ದೇವೇಗೌಡರು ಮೊತ್ತ ಮೊದಲ ಬಾರಿಗೆ ಪಕ್ಷೇತರ ಶಾಸಕರಾಗಿ ಆಯ್ಕೆಯಾಗುತ್ತಾರೆ. ಆಗ ನಿಜಲಿಂಗಪ್ಪ ಅವರು ತಮಿಳುನಾಡಿಗೆ ಹೋಗಿ ಕಾಮರಾಜ್ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ” ನಾವು ಎಷ್ಟು ಬೇಕಾದರೂ ನೀರು ಕೊಡುತ್ತೇವೆ. ನೀವು ಭತ್ತ ಬೆಳೆದು ನಮಗೆ ಕೊಡಿ” ಎಂದು ಭಾಷಣ ಮಾಡುತ್ತಾರೆ. ನಿಜಲಿಂಗಪ್ಪ ಅವರು ಆಗ ಕರ್ನಾಟಕದ ಸರಕಾರದ ಮುಖ್ಯಮಂತ್ರಿ. ಅವರ ಹೇಳಿಕೆಯನ್ನು ಖಂಡಿಸಿ 1964ರಲ್ಲಿ ದೇವೇಗೌಡರು ವಿಧಾನಸಭೆಯಲ್ಲಿ ಒಂದು ನಿರ್ಣಯ ಮಂಡಿಸುತ್ತಾರೆ. ಆಗ ಅದೇ ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರು ಆ ನಿರ್ಣಯ ಮಂಡನೆ ಬೇಡ ಎಂದು ಮನವಿ ಮಾಡುತ್ತಾರೆ. ಅಲ್ಲಿಗೂ ಸುಮ್ಮನಾಗದ ಗೌಡರು 1967-68ರಲ್ಲಿ ಮತ್ತೆ ಇನ್ನೊಂದು ನಿರ್ಣಯವನ್ನು ಮಂಡಿಸುತ್ತಾರೆ. ಅದರ ಫಲವೇ ಹಾರಂಗಿ, ಕಬಿನಿ, ಹೇಮಾವತಿ ಜಲಾಶಯಗಳ ನಿರ್ಮಾಣ ಹಾಗೂ ಕಾವೇರಿ ಕೊಳ್ಳದಲ್ಲಿ ಹತ್ತಾರು ಯೋಜನೆಗಳ ಜಾರಿ. ಇದೆಲ್ಲಕ್ಕೂ ಕಾರಣ ದೇವೇಗೌಡರ ಹೋರಾಟ ಎಂದು ಕುಮಾರಸ್ವಾಮಿ ಹೇಳಿದರು.
1968ರಲ್ಲಿ ಸಿದ್ದರಾಮಯ್ಯ ಅವರು ಇನ್ನೂ ರಾಜಕೀಯಕ್ಕೆ ಬಂದಿರಲಿಲ್ಲ. ಈ ಭಾಗದ ಜನರ ನೋವಿಗೆ ಸ್ಪಂದಿಸಿ ದೇವೇಗೌಡರು ಏನೆಲ್ಲಾ ಹೋರಾಟ ಮಾಡಿಕೊಂಡು ಬಂದರು ಹಾಗೂ ಕೆಆರ್ʼಎಸ್ ಕಟ್ಟುವಾಗಲೇ ಕೇವಲ 90,000 ಹೆಕ್ಟೇರ್ ಪ್ರದೇಶಕ್ಕೆ ನೀರೊದಗಿಸುವುದು ಎರಡೂ ರಾಜ್ಯಗಳ ನಡುವೆ ಆಗಿದ್ದ ಒಪ್ಪಂದ ತಿರುಳು. ಎಲ್ಲವನ್ನೂ ಇತಿಹಾಸವೇ ಹೇಳುತ್ತಿದೆ ಎಂದ ಹೆಚ್ಡಿಕೆ, ಮೇಕೆದಾಟು ಯೋಜನೆಗೆ ಇವರು ಡಿಪಿಆರ್ ಕೊಟ್ಟೆವು ಎಂದು ಹೇಳಿಕೊಳ್ಳುತ್ತಿದ್ದಾರೆ. 2018ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ದೆಹಲಿಯಲ್ಲಿ ಕೇಂದ್ರ ಜಲ ಸಂಪನ್ಮೂಲ ಮತ್ತು ಭೂ ಸಾರಿಗೆ ಸಚಿವರಾಗಿದ್ದ ನಿತಿನ್ ಗಡ್ಕರಿ ಅವರನ್ನು ನಾನು ಮತ್ತು ಹೆಚ್.ಡಿ.ರೇವಣ್ಣ ಭೇಟಿಯಾಗಿದ್ದೆವು. ಆಗ ನಾನು ಮೇಕೆದಾಟು ಬಗ್ಗೆ ಮನವಿ ಕೊಟ್ಟಾಗ ಅವರು ಕೂಡಲೇ ಒಂದು ಸಮಗ್ರ ಯೋಜನಾ ವರದಿ ಸಲ್ಲಿಸಿ ಎಂದು ಹೇಳಿದರು. ಆಗ ರಾಜ್ಯದ ಜಲ ಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಬಂದಿರಲಿಲ್ಲ. ನಾನೇ ಏಕಾಂಗಿಯಾಗಿ ಹೋಗಿದ್ದೆ. ಅಂದು ಗಡ್ಕರಿ ಅವರಿಗೆ ನಾನು ಮೇಕೆದಾಟು ಯೋಜನೆಯ ಎಲ್ಲ ಅಂಶಗಳನ್ನೂ ಮನವರಿಕೆ ಮಾಡಿಕೊಟ್ಟಿದ್ದೆ ಎಂದರು.
ಅದಾದ ಮೇಲೆ ಲೋಕಸಭೆ ಚುನಾವಣೆ ನಡೆದು ಹೊಸ ಜಲಶಕ್ತಿ ಸಚಿವರು ಬಂದರು. ಆ ಸಚಿವರ ಬಳಿ ಏನೇನು ಆಗಿದೆ ಎನ್ನುವುದು ನನಗೆ ಗೊತ್ತಿದೆ. ಅವರ ಬಳಿ ಪಾದಯಾತ್ರೆ ಹೊರಟಿರುವವರು ಏನೆಲ್ಲಾ ಮಾತನಾಡಿದ್ದಾರೆ ಎನ್ನುವುದು ಗೊತ್ತಿದೆ. ಈಗ ಅವರೇ ಪಾದಯಾತ್ರೆಗೆ ರಿಹರ್ಸಲ್ ಮಾಡ್ತಾ ಇದ್ದಾರೆ.
ಕಾವೇರಿ ವಿಷಯದಲ್ಲಿ ಏನೂ ಮಾಡಲಾಗದೇ ಇವರ ಪಕ್ಷದ ಅಂದಿನ ಮುಖ್ಯಮಂತ್ರಿ ಅತ್ತುಕೊಂಡು ಕೈಕಟ್ಟಿ ಕೂತಿದ್ದರು. ಆದರೆ, ದೇವೇಗೌಡರು ರಾಜ್ಯಕ್ಕೆ ಅನ್ಯಾಯವಾದರೆ ಆಮರಣ ಉಪವಾಸ ಕೂತರು. 2013ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿ ಅಧಿಕಾರಕ್ಕೆ ಬಂದರು. ಆಗ ಜಂಟಿ ಕಲಾಪದಲ್ಲಿ ರಾಜ್ಯಪಾಲರಿಂದ, ನಮ್ಮ ಭಾಗದ ಕಾವೇರಿ ಕೊಳ್ಳದಲ್ಲಿ ಕಾವೇರಿ ಐ ತೀರ್ಪಿನ ಭಾಗವಾಗಿ ಹೊಸ, ವಿಸ್ತರಣಾ, ಆಧುನೀಕರಣ ಹಾಗೂ ನವೀಕರಣ ಯೋಜನೆಗಳನ್ನು ಕೇಂದ್ರದ ಒಪ್ಪಿಗೆ ಕೋರಿ ಕೆಲಸ ಮಾಡುತ್ತೇವೆ ಅಂತ ಭಾಷಣ ಮಾಡಿಸಿದ್ದಾರೆ. ಆಗ ಅದರ ವಿರುದ್ಧ ನಾನು ಒಂದು ನಿರ್ಣಯವನ್ನು ಕೂಡ ಮಂಡಿಸಿದ್ದೆ.
ಜನರ ಆಶೀರ್ವಾದದಿಂದ ನಮಗೆ ಅಧಿಕಾರ ಸಿಕ್ಕಿದೆ:
ಹಾಸನದಿಂದ ಬಂದವರಿಗೆ ಅಧಿಕಾರ ಕೊಟ್ಟು ಸಹಿಸಿಕೊಂಡಿದ್ದೇವೆ. ಈಗ ಈ ಟೀಕೆಗಳನ್ನು ಸಹಿಸಿಕೊಳ್ಳುತ್ತೇವೆ ಎಂದು ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಗೆ ಖಾರವಾಗಿ ಮಾಜಿ ಮುಖ್ಯಮಂತ್ರಿಗಳು ಪ್ರತಿಕ್ರಿಯಿಸಿದರು.
“ನಮ್ಮ ದುಡಿಮೆ ಹಾಗೂ ಜನರ ಆಶೀರ್ವಾದದಿಂದ ನಮಗೆ ಅಧಿಕಾರ ಸಿಕ್ಕಿದೆ ವಿನಾ ಇವರಿಂದ ಅಲ್ಲ. ಆ ಜನರ ಕಷ್ಟ ಸುಖ ನೋಡಿದ್ದಕ್ಕೆ ಮತ ನೀಡಿದರು. ಇವರು ಅಧಿಕಾರ ಕೊಟ್ಟರಾ ನಮಗೆ?” ಎಂದು ಅವರು ಪ್ರಶ್ನಿಸಿದರು.
ಅವರು ಕಲ್ಲುಗಳನ್ನೇ ಜೀರ್ಣ ಮಾಡಿಕೊಂಡವರು ನನ್ನ ಟೀಕೆಗಳನ್ನು ಜೀರ್ಣ ಮಾಡಿಕೊಳ್ಳಲಾರರೆ? ಕನಕಪುರದ ಸುತ್ತಮುತ್ತ ಇರುವ ಕಲ್ಲು ಬಂಡೆಗಳನ್ನೆ ನುಂಗಿ ಜೀರ್ಣ ಮಾಡಿಕೊಂಡಿದ್ದಾರೆ ಅವರು. ಇನ್ನು ನನ್ನ ಹೇಳಿಕೆ ಅವರಿಗೆ ಜೀರ್ಣ ಅಗಲ್ಲವೆ? ಎಂದು ಡಿಕೆಶಿಗೆ ಟಾಂಗ್ ಕೊಟ್ಟರು.
ದೇವೇಗೌಡರ ಪಾದಯಾತ್ರೆ ಮಾಡಿದ್ದಾರೆ ನಿಜ. ಯಾವಾಗ ಸರಕಾರಗಳು ದಾರಿ ತಪ್ಪಿ ಅಧರ್ಮದ ದಾರಿಯಲ್ಲಿ ಹೋಗಿವೆಯೋ ಆಗ ಅವರು ಪಾದಯಾತ್ರೆ ಮಾಡಿದ್ದಾರೆ. ಮೊದಲು ಕುಣಿಗಲ್ʼನಲ್ಲಿ ಒಬ್ಬ ಮುಗ್ದ ಗುಂಡಿಗೆ ಬಲಿಯಾಗಿದ್ದರ ವಿರುದ್ಧ ಪಾದಯಾತ್ರೆ ಮಾಡಿದರು. ನಂತರ ನಂತರ 1983ರಲ್ಲಿ ಇಬ್ಬರು ಗೋಲಿಬಾರ್ʼಗೆ ಇಬ್ಬರು ರೈತರು ಬಲಿಯಾದ್ದನ್ನು ಖಂಡಿಸಿ ವಿಠಲೇನಹಳ್ಳಿಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಿದ್ದರು. ಆದರೆ, ಈಗಿನ ಮೇಕೆದಾಟು ಪಾದಯಾತ್ರೆಯಿಂದ ಯೋಜನೆ ಮತ್ತಷ್ಟು ಜಟಿಲವಾಗುತ್ತದೆ. ಸುಲಭವಾಗಿ ಆಗುವ ಯೋಜನೆ ಕಗ್ಗಂಟಾಗಲಿದೆ. ಪಾದಯಾತ್ರೆ ಬದಲಿಗೆ ದೆಹಲಿಗೆ ಹೋಗಿ ಒತ್ತಡ ಹೇರಿ ಕೆಲಸ ಮಾಡಿಸಿಕೊಳ್ಳಬೇಕು. ಈ ಪಾದಯಾತ್ರೆ ಸಂಪೂರ್ಣವಾಗಿ ಪೊಲಿಟಿಕಲ್ ಗಿಮಿಕ್. ಆ ಫೋಟೋಶೂಟ್ ಪ್ರೀ ವೆಡ್ಡಿಂಗ್ ಫೋಟೋಶೂಟ್ ರೀತಿಯಲ್ಲಿದೆ. ಅಲ್ಲದೆ, ಪ್ರಶ್ನೆ ಎತ್ತಿದ ನನ್ನನ್ನು ಸಾಹಿತಿಗಳಿದ್ದೀರಿ, ಬುದ್ಧಿವಂತರಿದ್ದೀರಿ ಅನ್ನುತ್ತಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.