ಬೆಂಗಳೂರು: ಸರ್ಕಾರದ ಹಣವನ್ನು ಬಳಸಿ ಬೆಳಗಾವಿಯಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ಪಕ್ಷದ ಸಮಾವೇಶವನ್ನು ಮಾಡಿವುದು ಖಂಡನೀಯ. ಇದರ ವಿರುದ್ಧ ವಿಧಾನಸೌಧ ಮುಂಭಾಗ ಶುಕ್ರವಾರ ಪ್ರತಿಭಟಿಸಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ದೊರೆತ ನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಿ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ನಕಲಿ ಗಾಂಧಿಗಳು ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿ ಈಗ ಬೆಳಗಾವಿಯಲ್ಲಿ ಸಮಾವೇಶ ಮಾಡುತ್ತಿದ್ದಾರೆ. ಗಾಂಧೀಜಿ ಬಹಳ ಸರಳವಾಗಿದ್ದರು. ಆದರೆ ಕಾಂಗ್ರೆಸ್ ನಾಯಕರು ಆಡಂಬರದ ಬದುಕು ನಡೆಸುತ್ತಿದ್ದಾರೆ. ಪ್ರಧಾನಿ, ಗೃಹ ಸಚಿವರು, ಎಚ್.ಡಿ.ಕುಮಾರಸ್ವಾಮಿ, ಸಂಸದರು, ಯಾರನ್ನೂ ಆಹ್ವಾನಿಸದೆ ಕಾಂಗ್ರೆಸ್ ಪಕ್ಷದ ನಾಯಕರನ್ನು ಮಾತ್ರ ಸಮಾವೇಶಕ್ಕೆ ಆಹ್ವಾನಿಸಲಾಗಿದೆ. ಇದು ಸರ್ಕಾರಿ ಕಾರ್ಯಕ್ರಮವಲ್ಲ, ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಎಂದು ದೂರಿದರು.
ಕಾಂಗ್ರೆಸ್‌ನವರು ಅಖಂಡ ಭಾರತವನ್ನು ಒಡೆದು ಹಾಕಿದ್ದರು. ನಾವು ಅಖಂಡ ಭಾರತದ ಚಿತ್ರ ತೋರಿಸಿದರೆ, ಕಾಂಗ್ರೆಸ್‌ನವರು ಜಮ್ಮು-ಕಾಶ್ಮೀರ ಇಲ್ಲದ ಭಾರತದ ಚಿತ್ರ ತೋರಿಸುತ್ತಿದ್ದಾರೆ. ಭಾರತದ ಭೂಪಟವನ್ನೇ ಛಿದ್ರ ಮಾಡಿರುವುದು ಖಂಡನೀಯ. ಕಾಂಗ್ರೆಸ್ ಇಡೀ ದೇಶವನ್ನು ಒಡೆಯುವ ಮನಸ್ಥಿತಿ ಹೊಂದಿದೆ ಎಂದರು.
ಅಂಬೇಡ್ಕರ್‌ರನ್ನು ಸೋಲಿಸಿದ ಕಾಂಗ್ರೆಸ್
ಬಾಬಾ ಸಾಹೇಬ್ ಅಂಬೇಡ್ಕರ್ ಎಂದೂ ಕಾಂಗ್ರೆಸ್‌ನ ನಾಯಕರಾಗಿರಲಿಲ್ಲ. ಅವರು ಕಾಂಗ್ರೆಸ್ ಪಕ್ಷವನ್ನು ವಿರೋಧಿಸಿ, ಸರ್ಕಾರದ ವಿರುದ್ಧ ನಿಂತಿದ್ದರು. ತಮ್ಮದೇ ಪಕ್ಷ ಆರಂಭಿಸಿ ಅಲ್ಲಿಂದಲೇ ಸ್ಪರ್ಧಿಸಿದ್ದರು. ಅವರು ಚುನಾವಣೆಗೆ ನಿಂತಾಗ ಜವಹರಲಾಲ್ ನೆಹರು ಅವರ ವಿರುದ್ಧ ಪ್ರಚಾರ ಮಾಡಿ, ಅಂಬೇಡ್ಕರ್ ಸೋಲಿಸಿ ಎಂಬ ಸಂದೇಶ ನೀಡಿದ್ದರು. ಈಗ ಕಾಂಗ್ರೆಸ್ ನಾಯಕರು ಯಾವ ಮುಖ ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದರು.