ಬೆಂಗಳೂರು: ಕಲಬುರಗಿ ಜೈಲಿನಲ್ಲಿ ಕೈದಿಗಳಿಗೆ ವಿಶೇಷ ಸವಲತ್ತು ದೊರಕುತ್ತಿರುವ ಆರೋಪಗಳ ಕುರಿತು ಹಿನ್ನೆಲೆಯಲ್ಲಿ ಮಹಾನಿರ್ದೇಶಕ ಅಲೋಕ್ ಕುಮಾರ್ ಶೀಘ್ರವೇ ಸ್ಥಳ ಪರಿಶೀಲನೆ ನಡೆಸಲಿದ್ದಾರೆ.
ಬೆಂಗಳೂರಿನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡ ಗೃಹ ಸಚಿವ ಪರಮೇಶ್ವರ್, ಹೊಸ ಜೈಲು ಮಹಾನಿರ್ದೇಶಕ ಅಲೋಕ್ ಕುಮಾರ್ ಅವರಿಗೆ ಜೈಲುಗಳಿಗೆ ಭೇಟಿ ನೀಡುವಂತೆ ಸೂಚಿಸಲಾಗಿದೆ ಎಂದು ಹೇಳಿದರು. “ಅವರು ಶುಕ್ರವಾರ ಕಲಬುರಗಿ ಜೈಲಿಗೆ ಭೇಟಿ ನೀಡಲಿದ್ದು, ಬೆಳಗಾವಿ ಹಾಗೂ ಕಲಬುರಗಿಯ ಜೈಲುಗಳನ್ನು ವೈಯಕ್ತಿಕವಾಗಿ ಪರಿಶೀಲಿಸಲಿದ್ದಾರೆ,” ಎಂದರು.
ರಾಜ್ಯದಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಪರಮೇಶ್ವರ, “ಕೆಲವು ಸಂಘಟಿತ ತಂಡಗಳು ರಾಜ್ಯದ ಹೊರಗಿನಿಂದ ಬಂದಿರಬಹುದೆಂಬ ಅನುಮಾನವಿದೆ. ನಾವು ನಿಗಾ ಇಟ್ಟಿದ್ದು, ಪತ್ತೆಯಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಹೇಳಿದರು.



















































