ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ನಟ ವಿಕಿ ಕೌಶಲ್ ತಮ್ಮ ಪುತ್ರನಿಗೆ ವಿಹಾನ್ ಕೌಶಲ್ ಎಂದು ನಾಮಕರಣ ಮಾಡಿದ್ದಾರೆ. ಗಂಡು ಮಗುವಿಗೆ ಜನ್ಮ ನೀಡಿದ ಎರಡು ತಿಂಗಳ ಬಳಿಕ ದಂಪತಿ ಈ ಸಂತಸದ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾರೆ.
ಹೆಸರು ಬಹಿರಂಗಗೊಂಡ ತಕ್ಷಣವೇ ಚಿತ್ರರಂಗದ ಹಲವಾರು ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ನಟಿ ಪರಿಣಿತಿ ಚೋಪ್ರಾ “ಲಿಟಲ್ ಬಡ್ಡಿ!” ಎಂದು ಕಾಮೆಂಟ್ ಮಾಡಿದ್ದಾರೆ. ನಿರ್ದೇಶಕ ಕರಣ್ ಜೋಹರ್ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್‌ನ್ನು ಮರುಹಂಚಿಕೊಂಡು, ವಿಹಾನ್‌ಗೆ ಪ್ರೀತಿ ಮತ್ತು ಆಶೀರ್ವಾದಗಳನ್ನು ಕಳುಹಿಸಿದ್ದಾರೆ. ದಿಯಾ ಮಿರ್ಜಾ, ಭೂಮಿ ಪೆಡ್ನೇಕರ್, ಇಸಾಬೆಲ್ಲೆ ಕೈಫ್ ಸೇರಿದಂತೆ ಅನೇಕರು ಹೃದಯದ ಎಮೋಜಿಗಳ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
ವಿಕಿ ಕೌಶಲ್ ಅವರ ಸಹೋದರ ಸನ್ನಿ ಕೌಶಲ್, ವಿಹಾನ್ ಹೆಸರಿನ ಅರ್ಥವನ್ನು ವಿವರಿಸಿ, “ವಿಹಾನ್ – ಬೆಳಕಿನ ಮೊದಲ ಕಿರಣ” ಎಂದು ಬರೆದಿದ್ದಾರೆ. 2019ರ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಚಿತ್ರದಲ್ಲಿ ವಿಕಿ ಅಭಿನಯಿಸಿದ್ದ ಪಾತ್ರದ ಹೆಸರು ಕೂಡ ವಿಹಾನ್ ಆಗಿದ್ದದ್ದು ಗಮನಾರ್ಹ.
ಕತ್ರಿನಾ ಮತ್ತು ವಿಕಿ ನವೆಂಬರ್ 7, 2025ರಂದು ತಂದೆ-ತಾಯಿಯಾಗಿದ್ದರು. ಆಗ ಸಾಮಾಜಿಕ ಜಾಲತಾಣದಲ್ಲಿ ಜಂಟಿ ಪೋಸ್ಟ್ ಹಂಚಿಕೊಂಡು, “ಅಪಾರ ಪ್ರೀತಿ ಮತ್ತು ಕೃತಜ್ಞತೆಯೊಂದಿಗೆ ನಮ್ಮ ಗಂಡು ಮಗುವನ್ನು ಸ್ವಾಗತಿಸುತ್ತೇವೆ” ಎಂದು ಅವರು ಸಂತಸ ವ್ಯಕ್ತಪಡಿಸಿದ್ದರು.
ಕತ್ರಿನಾ ಕೈಫ್ ಮತ್ತು ವಿಕಿ ಕೌಶಲ್ 2021ರಲ್ಲಿ ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿ ಖಾಸಗಿ ಸಮಾರಂಭದಲ್ಲಿ ವಿವಾಹವಾಗಿದ್ದರು.



















































