ನವದೆಹಲಿ: 2025–26ರ ಹಣಕಾಸು ವರ್ಷದ ಮೊದಲ ಒಂಬತ್ತು ತಿಂಗಳುಗಳಲ್ಲಿ (ಏಪ್ರಿಲ್–ಡಿಸೆಂಬರ್) ಕೇಂದ್ರದಿಂದ ರಾಜ್ಯಗಳಿಗೆ ಭಾರತೀಯ ರೈಲ್ವೆ ಮೂಲಕ ರಸಗೊಬ್ಬರ ಪೂರೈಕೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದು, ಒಟ್ಟು ಸರಬರಾಜು 530.16 ಲಕ್ಷ ಮೆಟ್ರಿಕ್ ಟನ್‌ಗಳಿಗೆ ಏರಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ. ಇದೇ ಮೊದಲ ಬಾರಿಗೆ ಈ ಅವಧಿಯಲ್ಲಿ ಪೂರೈಕೆ 500 ಲಕ್ಷ ಮೆಟ್ರಿಕ್ ಟನ್‌ಗಳ ಗಡಿಯನ್ನು ದಾಟಿದೆ.
ಹಿಂದಿನ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ರಸಗೊಬ್ಬರ ಸಾಗಣೆ ಶೇ.12.2ರಷ್ಟು ಹೆಚ್ಚಳವಾಗಿದ್ದು, 2023–24ರ ದಾಖಲೆಯನ್ನೂ ಶೇ.8.5ರಷ್ಟು ಮೀರಿಸಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಈ ಅವಧಿಯಲ್ಲಿ ಯೂರಿಯಾ ಸೇರಿ ಎಲ್ಲಾ ಪ್ರಮುಖ ರಸಗೊಬ್ಬರಗಳ ಲಭ್ಯತೆಯನ್ನು ಕೇಂದ್ರವು ಖಚಿತಪಡಿಸಿದೆ. ಒಟ್ಟು 312.40 ಲಕ್ಷ ಮೆಟ್ರಿಕ್ ಟನ್ ಅಗತ್ಯವಿದ್ದರೆ, 350.45 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಪೂರೈಕೆಯಾಗಿದೆ. ಇದೇ ರೀತಿ, ಡಿಎಪಿ, ಎಂಒಪಿ ಹಾಗೂ ಎನ್‌ಪಿಕೆಎಸ್ ಸೇರಿರುವ ಫಾಸ್ಫರಸ್ ಮತ್ತು ಪೊಟ್ಯಾಸಿಯಮ್ (ಪಿ & ಕೆ) ರಸಗೊಬ್ಬರಗಳ ಅಗತ್ಯ 252.81 ಲಕ್ಷ ಮೆಟ್ರಿಕ್ ಟನ್ ಇದ್ದು, ಪೂರೈಕೆ 287.69 ಲಕ್ಷ ಮೆಟ್ರಿಕ್ ಟನ್‌ಗಳಿಗೆ ತಲುಪಿದೆ.
ರೈಲ್ವೆಯ ಮೂಲಕ ರಸಗೊಬ್ಬರ ರೇಕ್‌ಗಳ ವೇಗದ ಹಾಗೂ ಸುಗಮ ಚಲನೆಯಿಂದ ರಾಜ್ಯಗಳಿಗೆ ಸಕಾಲಿಕ ಪೂರೈಕೆ ಸಾಧ್ಯವಾಗಿದೆ. ಇದರಿಂದ ಕೃಷಿಯ ಪ್ರಮುಖ ಹಂತಗಳಲ್ಲಿ ರೈತರಿಗೆ ಯಾವುದೇ ಕೊರತೆ ಎದುರಾಗದಂತೆ ನೋಡಿಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ರಸಗೊಬ್ಬರ ಇಲಾಖೆ ಮತ್ತು ರೈಲ್ವೆ ಸಚಿವಾಲಯದ ನಿಕಟ ಸಹಕಾರವು ಈ ಸಾಧನೆಗೆ ಪ್ರಮುಖ ಕಾರಣವಾಗಿದೆ ಎಂದು ತಿಳಿಸಲಾಗಿದೆ.
ಅಧಿಕೃತ ಅಂಕಿಅಂಶಗಳ ಪ್ರಕಾರ, ಜುಲೈ 2025ರಲ್ಲಿ ದಿನಕ್ಕೆ ಸರಾಸರಿ 72 ರೇಕ್‌ಗಳಷ್ಟು ಲೋಡಿಂಗ್ ನಡೆದಿದ್ದು, ಆಗಸ್ಟ್‌ನಲ್ಲಿ ಇದು 78 ರೇಕ್‌ಗಳಿಗೆ ಮತ್ತು ಸೆಪ್ಟೆಂಬರ್‌ನಲ್ಲಿ 80 ರೇಕ್‌ಗಳಿಗೆ ಏರಿಕೆಯಾಗಿದೆ. ಯೂರಿಯಾ ರೇಕ್‌ಗಳ ಸಂಖ್ಯೆ 10,841ಕ್ಕೆ ತಲುಪಿದ್ದು, ಇದು ಕಳೆದ ವರ್ಷಕ್ಕಿಂತ ಶೇ.8ರಷ್ಟು ಹೆಚ್ಚಳವಾಗಿದೆ. ಪಿ & ಕೆ ರಸಗೊಬ್ಬರಗಳ ರೇಕ್‌ಗಳು 8,806ಕ್ಕೆ ಏರಿದ್ದು, ಶೇ.18ರಷ್ಟು ಬೆಳವಣಿಗೆ ದಾಖಲಿಸಿದೆ.
ರೈಲ್ವೆ ಸಚಿವಾಲಯ, ಬಂದರುಗಳು, ರಾಜ್ಯ ಸರ್ಕಾರಗಳು ಮತ್ತು ರಸಗೊಬ್ಬರ ಕಂಪನಿಗಳ ನಡುವಿನ ಉತ್ತಮ ಸಮನ್ವಯದಿಂದ ಖಾರಿಫ್ ಮತ್ತು ನಡೆಯುತ್ತಿರುವ ರಬಿ ಋತುವಿನಲ್ಲಿ ರೈತರಿಗೆ ತಡೆರಹಿತ ಹಾಗೂ ಸಕಾಲಿಕ ರಸಗೊಬ್ಬರ ಪೂರೈಕೆಯನ್ನು ಖಚಿತಪಡಿಸಲು ಸಾಧ್ಯವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.





















































