ನವದೆಹಲಿ: ಜಾಗತಿಕ ಏರೋಸ್ಪೇಸ್ ಸಂಸ್ಥೆ ಎಂಬ್ರೇರ್ ಹಾಗೂ ಅದಾನಿ ಡಿಫೆನ್ಸ್ & ಏರೋಸ್ಪೇಸ್ ಭಾರತದಲ್ಲಿ ಸಮಗ್ರ ಪ್ರಾದೇಶಿಕ ಸಾರಿಗೆ ವಿಮಾನ (RTA) ಪರಿಸರ ವ್ಯವಸ್ಥೆ ಅಭಿವೃದ್ಧಿಪಡಿಸುವ ಉದ್ದೇಶದಿಂದ ತಿಳುವಳಿಕೆ ಪತ್ರಕ್ಕೆ (MoU) ಸಹಿ ಹಾಕಿವೆ. ವಿಮಾನ ತಯಾರಿಕೆ, ಪೂರೈಕೆ ಸರಪಳಿ, ಆಫ್ಟರ್‌ಮಾರ್ಕೆಟ್ ಸೇವೆಗಳು ಮತ್ತು ಪೈಲಟ್ ತರಬೇತಿ ಕ್ಷೇತ್ರಗಳಲ್ಲಿ ಸಹಕಾರ ಈ ಒಡಂಬಡಿಕೆಯ ಪ್ರಮುಖ ಅಂಶಗಳಾಗಿವೆ.
ಆತ್ಮನಿರ್ಭರ ಭಾರತ್ ಉಪಕ್ರಮ ಹಾಗೂ ಉಡಾನ್ ಯೋಜನೆಗೆ ಅನುಗುಣವಾಗಿ, ಭಾರತದಲ್ಲೇ ಪ್ರಾದೇಶಿಕ ಸಾರಿಗೆ ವಿಮಾನಗಳ ಅಸೆಂಬ್ಲಿ ಲೈನ್ ಸ್ಥಾಪಿಸುವುದು ಮತ್ತು ಹಂತ ಹಂತವಾಗಿ ಸ್ಥಳೀಯೀಕರಣ ಹೆಚ್ಚಿಸುವ ಗುರಿಯನ್ನು ಪಾಲುದಾರರು ಹೊಂದಿದ್ದಾರೆ. ಇದರಿಂದ ದೇಶೀಯ ವಾಯು ಸಂಪರ್ಕ ವಿಸ್ತರಣೆಗೆ ಉತ್ತೇಜನ ಸಿಗಲಿದೆ ಎಂದು ಕಂಪನಿಗಳು ಹೇಳಿವೆ.
ಈ ಸಹಯೋಗದ ಮೂಲಕ ಎಂಬ್ರೇರ್‌ನ ವಿಮಾನ ವಿನ್ಯಾಸ ಮತ್ತು ಉತ್ಪಾದನಾ ಪರಿಣತಿಯನ್ನು ಅದಾನಿಯ ವಾಯುಯಾನ ಮೌಲ್ಯ ಸರಪಳಿ ಸಾಮರ್ಥ್ಯಗಳೊಂದಿಗೆ ಸಂಯೋಜಿಸಲಾಗುತ್ತದೆ. ವಿಮಾನ ನಿಲ್ದಾಣ ಮೂಲಸೌಕರ್ಯ, MRO ಸೇವೆಗಳು ಹಾಗೂ ಪೈಲಟ್ ತರಬೇತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳು ತೆರೆಯಲಿವೆ ಎಂದು ನಿರೀಕ್ಷಿಸಲಾಗಿದೆ.
ಈ ಪ್ರಸ್ತಾವಿತ ಪರಿಸರ ವ್ಯವಸ್ಥೆಯಿಂದ ಎಂಜಿನಿಯರಿಂಗ್, ಉತ್ಪಾದನೆ ಮತ್ತು ಬೆಂಬಲ ಸೇವೆಗಳಲ್ಲಿ ನೇರ ಹಾಗೂ ಪರೋಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಜೊತೆಗೆ ಜಾಗತಿಕ ಏರೋಸ್ಪೇಸ್ ಕ್ಷೇತ್ರದಲ್ಲಿ ಭಾರತದ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಅದಾನಿ ಡಿಫೆನ್ಸ್ & ಏರೋಸ್ಪೇಸ್ ಹಾಗೂ ಎಂಬ್ರೇರ್ ಪ್ರತಿನಿಧಿಗಳು ಅಭಿಪ್ರಾಯಪಟ್ಟಿದ್ದಾರೆ.

























































