ಬೆಂಗಳೂರು: 2013–14ರಿಂದ ಉತ್ತರ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲಾಗುತ್ತಿದ್ದು, 2025–26ನೇ ಸಾಲಿನಲ್ಲಿ ₹5,000 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಪರಿಷತ್ತಿನಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ನಡೆದ ಚರ್ಚೆಗೆ ಉತ್ತರಿಸಿದ ಅವರು, ವಿಧಾನಪರಿಷತ್ ಹಿರಿಯರ ಮನೆ ಆಗಿದ್ದು, ಇಲ್ಲಿನ ಸದಸ್ಯರ ಸಲಹೆಗಳು ಪ್ರಾದೇಶಿಕ ಅಭಿವೃದ್ಧಿಗೆ ಬಹಳ ಮಹತ್ವದವೆಯೆಂದು ಹೇಳಿದರು. ರಾಜ್ಯದ ಜನಸಂಖ್ಯೆಯಲ್ಲಿ ಉತ್ತರ ಕರ್ನಾಟಕದ ಪಾಲು ಶೇ.42 ಇದ್ದು, 31 ಜಿಲ್ಲೆಗಳಲ್ಲಿನ 14 ಜಿಲ್ಲೆಗಳು ಉತ್ತರ ಕರ್ನಾಟಕಕ್ಕೆ ಸೇರಿವೆ. 224 ವಿಧಾನಸಭಾ ಕ್ಷೇತ್ರಗಳಲ್ಲಿ 97 ಕ್ಷೇತ್ರಗಳು ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗದಲ್ಲಿವೆ ಎಂದು ವಿವರಿಸಿದರು.
ರಾಜ್ಯದ ಸಮಗ್ರ ಅಭಿವೃದ್ಧಿಗೆ ದಕ್ಷಿಣ ಮತ್ತು ಉತ್ತರ ಕರ್ನಾಟಕದ ನಡುವಿನ ಅಸಮತೋಲನ ನಿವಾರಿಸಬೇಕೆಂದು ಒತ್ತಿ ಹೇಳಿದ ಸಿಎಂ, ಪ್ರಾದೇಶಿಕ ಅಸಮಾನತೆ ಮುಂದುವರಿದರೆ ಜನರ ಅಸಮಾಧಾನವೂ ಮುಂದುವರಿಯುತ್ತದೆ ಎಂದರು. ಬೆಂಗಳೂರು ಹಾಲು ಯೂನಿಯನ್‌ನಲ್ಲಿ ದಿನಕ್ಕೆ 17 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದರೆ, ಕಲಬುರಗಿ ಹಾಲು ಯೂನಿಯನ್‌ನಲ್ಲಿ ಕೇವಲ 67 ಸಾವಿರ ಲೀಟರ್ ಮಾತ್ರ ಉತ್ಪಾದನೆಯಾಗುತ್ತಿದೆ. ಇದು ಪ್ರಾದೇಶಿಕ ಅಸಮಾನತೆಯ ಸ್ಪಷ್ಟ ಉದಾಹರಣೆ ಎಂದು ಹೇಳಿದರು.
ರಾಜ್ಯದಲ್ಲಿ ಸರಾಸರಿ ತಲಾ ಆದಾಯ ₹3,39,813 ಇದ್ದು, ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಹೈನುಗಾರಿಕೆ, ಕೈಗಾರಿಕೆಗಳ ವಿಸ್ತರಣೆ ಮತ್ತು ಗ್ಯಾರಂಟಿ ಯೋಜನೆಗಳಿಂದ ವಲಸೆ ಕಡಿಮೆಯಾಗಿದ್ದು, ಆರ್ಥಿಕತೆ ಬಲಗೊಂಡಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಹೈದರಾಬಾದ್ ಕರ್ನಾಟಕಕ್ಕೆ 371ಜೆ ವಿಶೇಷ ಸ್ಥಾನಮಾನ ನೀಡಿದ್ದು ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರವೇ ಎಂದು ತಿಳಿಸಿದ ಅವರು, 2013ರಲ್ಲಿ ಸಂವಿಧಾನ ತಿದ್ದುಪಡಿ ಮೂಲಕ ಈ ಹಕ್ಕು ದೊರಕಿತು ಎಂದರು. ಹೆಚ್.ಕೆ. ಪಾಟೀಲ್ ಅಧ್ಯಕ್ಷತೆಯ ಸಮಿತಿಯ ಶಿಫಾರಸ್ಸುಗಳನ್ನು ಯಥಾವತ್ತು ಜಾರಿಗೆ ತರಲಾಗಿದೆ ಎಂದೂ ಹೇಳಿದರು.
ಉತ್ತರ ಕರ್ನಾಟಕ ಅಭಿವೃದ್ಧಿಗೆ 2013–14ರಿಂದ ಇಲ್ಲಿವರೆಗೆ ಒಟ್ಟು ₹24,778 ಕೋಟಿ ಅನುದಾನ ಮಂಜೂರಾಗಿದ್ದು, ₹16,229 ಕೋಟಿ ಬಿಡುಗಡೆ ಆಗಿದೆ. ಇದರಲ್ಲಿ ₹14,890 ಕೋಟಿ ವೆಚ್ಚವಾಗಿದೆ. ಆದರೆ 2013–14ರಿಂದ ಇಂದಿನವರೆಗೆ ಕೇಂದ್ರದ ಬಿಜೆಪಿ ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಒಂದು ಪೈಸೆಯನ್ನೂ ನೀಡಿಲ್ಲ ಎಂದು ಆರೋಪಿಸಿದರು.
ಜಲಜೀವನ್ ಮಿಷನ್‌ನಡಿ ರಾಜ್ಯಕ್ಕೆ ಬರಬೇಕಾದ ₹13,500 ಕೋಟಿ ಕೇಂದ್ರದಿಂದ ದೊರಕಿಲ್ಲ. ಕಳಸಾ–ಬಂಡೂರಿ ಯೋಜನೆಗೂ ಕೇಂದ್ರದಿಂದ ಸ್ಪಷ್ಟ ಅನುಮತಿ ಸಿಗದಿರುವುದನ್ನು ಅವರು ಟೀಕಿಸಿದರು.
ತಮ್ಮ ಸರ್ಕಾರ ಗಟ್ಟಿಯಾಗಿದ್ದು, ಅಸ್ಥಿರಗೊಳಿಸುವ ಬಿಜೆಪಿ ಪ್ರಯತ್ನಗಳು ವಿಫಲವಾಗಲಿವೆ ಎಂದು ಹೇಳಿದ ಸಿದ್ದರಾಮಯ್ಯ, ಕಾಂಗ್ರೆಸ್ ಸರ್ಕಾರ ತನ್ನ ಪೂರ್ಣ ಅವಧಿ ಪೂರೈಸಿ, 2028ರಲ್ಲಿಯೂ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
















































