ಬೆಂಗಳೂರು: ಆಲಮಟ್ಟಿ ಎಡದಂಡೆ ಕಾಲುವೆಯ ಕಿ.ಮೀ.0.00 ಯಿಂದ 68.24ರ ವರೆಗಿನ (ಬಾಕಿ ಉಳಿದ) ಹಾಗೂ ವಿತರಣಾ ಕಾಲುವೆಗಳ ಸ್ಟಕ್ಚರ್ ಒಳಗೊಂಡಂತೆ ಆಧುನೀಕರಣ ಕಾಮಗಾರಿಯ ವಿವರವಾದ ಯೋಜನಾ ವರದಿಗೆ 75.41 ಕೋಟಿ ರೂಪಾಯಿಯ ಅಂದಾಜು ಮೊತ್ತದ ಕಾಮಗಾರಿಗೆ ಡಿಸೆಂಬರ್ 20, 2021ರಂದು ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆ ಕಿ.ಮೀ.0.00 ರಿಂದ 68.24 ವರೆಗಿನ (ಹಾಳಾಗಿರುವ ಆಯ್ದ ಭಾಗಗಳ) ಹಾಗೂ ವಿತರಣಾ ಕಾಲುವೆಗಳ ಸ್ಟ್ರಕ್ಚರ್ ಒಳಗೊಂಡ ಆಧುನೀಕರಣ ಕಾಮಗಾರಿಯ ರೂ.112.48 ಕೋಟಿ ಅಂದಾಜು ಮೊತ್ತದ (2016-17ನೇ ಸಾಲಿನ ದರಪಟ್ಟಿರನ್ವಯ) ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈ ಆಡಳಿತಾತ್ಮಕ ಅನುಮೋದನೆ ಮೇರೆಗೆ ಈಗಾಗಲೇ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯ ಕಿ.ಮೀ. 0.00 ರಿಂದ 68.24 ವರೆಗಿನ (ಆಯ್ದ ಭಾಗಗಳ) ಸ್ಟ್ರಕ್ಚರ್ ಒಳಗೊಂಡಂತೆ ಆಧುನೀಕರಣದ ಪ್ಯಾಕೇಜ್ ಕಾಮಗಾರಿಯನ್ನು ಟೆಂಡರ್ ಆಧಾರದ ಮೇಲೆ ಗುತ್ತಿಗೆ ವಹಿಸಿದ್ದು, ಕಾಮಗಾರಿ ಪೂರ್ಣಗೊಂಡಿರುತ್ತದೆ. ಅದಾದನಂತರ ಕಿ.ಮೀ. 0.00 ರಿಂದ 68.24 ವರೆಗಿನ (ಆಯ್ದ ಭಾಗಗಳ) ವಿತರಣಾ ಕಾಲುವೆಗಳ ಆಧುನೀಕರಣದ ಕಾಮಗಾರಿಗಳನ್ನು 3 ಪ್ಯಾಕೇಜ್ ಗಳಲ್ಲಿ ಗುತ್ತಿಗೆ ವಹಿಸಿದ್ದು, ಕಾಮಗಾರಿ ಪ್ರಗತಿಯಲ್ಲಿರುತ್ತದೆ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಮುದ್ದೇಬಿಹಾಳ ಮತಕ್ಷೇತ್ರದ ಜನಪ್ರತಿನಿಧಿಗಳು ಆಲಮಟ್ಟಿ ಎಡದಂಡೆ ಕಾಲುವೆಯ ಆಧುನೀಕರಣದ ಸುಮಾರು 30 ಕಿ.ಮೀ. ಕಾಮಗಾರಿ ತೆಗೆದುಕೊಂಡಿದ್ದು, ಇನ್ನುಳಿದ 56 ಕಿಮೀ. ಕಾಲುವೆಯ ಆಧುನೀಕರಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಮನವಿಯನ್ನು ಸಲ್ಲಿಸಿರುತ್ತಾರೆ ಈ ಹಿನ್ನೆಲೆಯಲ್ಲಿ ಸಚಿವ ಸಂಪುಟಕ್ಕೆ ಈ ಕಾಲುವೆ ಜಾಲದ ಆಧುನಿಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ಕೋರಲಾಗಿತ್ತು ಎಂದವರು ತಿಳಿಸಿದ್ದಾರೆ.
ಆಲಮಟ್ಟಿ ಎಡದಂಡೆ ಕಾಲುವೆಯ ಜಾಲದ ಆಧುನೀಕರಣ ಕಾಮಗಾರಿಯ ಪ್ರಸ್ತಾವನೆಯಿಂದ ಕಾಲುವೆ ಜಾಲದಲ್ಲಿ ಸಮರ್ಪಕ ನೀರು ನಿಯಂತ್ರಣ ಹಾಗೂ ನಿರ್ವಹಣೆ ಸಾಧ್ಯವಾಗುವುದರಿಂದ ನಿಗದಿತ ಅಚ್ಚುಕಟ್ಟು ಕ್ಷೇತ್ರಕ್ಕೆ ಮತ್ತು ಕಾಲುವೆ ಜಾಲದ ಕೊನೆ ಅಂಚಿನ ಭಾಗಕ್ಕೆ ಸಮರ್ಪಕವಾಗಿ ನೀರು ಪೂರೈಸುವುದಕ್ಕೆ ಸಾಧ್ಯವಾಗುತ್ತದೆ ಎಂದು ಜಲ ಸಂಪನ್ಮೂಲ ಸಚಿವರು ಹೇಳಿದ್ದಾರೆ.