ಬೆಂಗಳೂರು: ಕರ್ನಾಟಕ ವಿಧಾನಸಭೆಯ ಮುಂಗಾರು ಅಧಿವೇಶನ ಆಗಸ್ಟ್ 11 ರಿಂದ 22ರವರೆಗೆ ಒಟ್ಟು 9 ದಿನಗಳ ಕಾಲ ನಡೆಯಲಿದೆ. ಈ ಕುರಿತು ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಆಗಸ್ಟ್ 11 ರಂದು ಬೆಳಿಗ್ಗೆ 11 ಗಂಟೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ವಿಧಾನಸಭೆ ಹಾಗೂ ವಿಧಾನಪರಿಷತ್ ನ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡುವರು.
ಈ ಬಾರಿ ಅಧಿವೇಶನವು ರಾಜಕೀಯವಾಗಿ ತೀವ್ರ ಚರ್ಚೆಗೆ ಕಾರಣವಾಗುವ ಸಾಧ್ಯತೆ ಹೊಂದಿದ್ದು, ಸರ್ಕಾರದ ನಿರ್ಧಾನಗಳನ್ನು ಗುರಿಯಾಗಿಸಿ ವಿಪಕ್ಷಗಳು ಉಗ್ರ ರಣತಂತ್ರ ರೂಪಿಸುತ್ತಿವೆ.
ಐಪಿಎಲ್ ವಿಜಯೋತ್ಸವ ಸಂದರ್ಭ ನಡೆದ ಕಾಲ್ತುಳಿತ ಪ್ರಕರಣ, ನೂತನ ಜಾತಿ ಗಣತಿ ಕುರಿತ ಸರ್ಕಾರದ ನಿರ್ಧಾರ, ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿಗೆ ಸಂಬಂಧಿಸಿದ ಸಮೀಕ್ಷೆಯಲ್ಲಿನ ಅಸಮಾನತೆ ಸೇರಿದಂತೆ ವಿವಿಧ ವಿಚಾರಗಳನ್ನು ಮುಂದೆ ಇಟ್ಟುಕೊಂಡು ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ದಪ್ಪ ಧ್ವನಿ ಎತ್ತಲಿವೆ.
ಪ್ರಮುಖ ಮಸೂದೆಗಳ ಮಂಡನೆ ನಿರೀಕ್ಷೆ
ಅಧಿವೇಶನದಲ್ಲಿ ‘ಕರ್ನಾಟಕ ರೋಹಿತ್ ವೇಮುಲಾ ಮಸೂದೆ’, ‘ಕರ್ನಾಟಕ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿ ನಿಷೇಧ ಮಸೂದೆ’, ‘ದ್ವೇಷ ಭಾಷಣ ಹಾಗೂ ದ್ವೇಷ ಅಪರಾಧ ತಡೆ ಮಸೂದೆ’ಗಳು ಮಂಡನೆಯಾಗುವ ಸಾಧ್ಯತೆವಿದೆ. ಈ ಮೂಲಕ ಸರ್ವಸಾಮಾನ್ಯರ ಹಿತಕಾಯ್ದಂತೆ ಕಾಯ್ದೆಗಳನ್ನು ತರಲು ಸರ್ಕಾರ ಯತ್ನಿಸಲಿದೆ.
ಅಧಿವೇಶನದಲ್ಲಿ ರಾಜ್ಯದ ಆರ್ಥಿಕ ಸ್ಥಿತಿ, ಬೆಳೆ ನಷ್ಟ ಪರಿಹಾರ, ಪಡಿತರ ವ್ಯವಸ್ಥೆ, ಉಚಿತ ವಿದ್ಯುತ್ ಯೋಜನೆ ಹಾಗೂ ಬೆಳಗಾವಿ ಗಡಿಭಾಗದ ಸಮಸ್ಯೆಗಳ ಕುರಿತ ಸಹ ಚರ್ಚೆಗಳು ನಡೆಯುವ ನಿರೀಕ್ಷೆಯೂ ಇದೆ.