ಬೆಂಗಳೂರು: ಅಂತರರಾಜ್ಯ ಜಲವಿವಾದ ಕಾಯ್ದೆಯನ್ನು ಸಂಪೂರ್ಣವಾಗಿ ತಿದ್ದುಪಡಿ ಮಾಡುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ *ಜಲ ಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಗಳ ಕುರಿತಂತೆ ದಕ್ಷಿಣ ಭಾರತದ ರಾಜ್ಯಗಳ ಪ್ರಾದೇಶಿಕ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು. ಜಲ ವಿವಾದಗಳಿಗೆ ಸಂಬಂಧಿಸಿದಂತೆ ಸಂಕುಚಿತ ರಾಜಕಾರಣದ ಬದಲಿಗೆ ಹೆಚ್ಚು ಜನರಿಗೆ ನೀರು ಲಭ್ಯವಾಗಲು ಕಾಯ್ದೆಯಲ್ಲಿ ತಿದ್ದುಪಡಿ ತರಬೇಕು. ನದಿ ಪಾತ್ರಗಳ ನಿರ್ವಹಣೆ ಮಾತ್ರ ಇದಕ್ಕೆ ಪರಿಹಾರ ಎಂದರು.
ಜನರಿಗೆ ನೀರು ಒದಗಿಸುವುದು ಸರ್ಕಾರದ ಕರ್ತವ್ಯ. ನೀರಿನ ವಿಚಾರದಲ್ಲಿ ಎಲ್ಲರೂ ಒಮ್ಮತದಿಂದ ಕಾರ್ಯನಿರ್ವಹಿಸಬೇಕು. ನೀರು ಸರಬರಾಜಿನ ಮೂಲಕ ಸುಸ್ಥಿರ ಜೀವನೋಪಾಯವನ್ನು ಕಲ್ಪಿಸಲು ಸಾಧ್ಯ ಎನ್ನುವುದು ನಮ್ಮ ಪ್ರಧಾನಿಗಳ ಗುರಿಯಾಗಿದ್ದು, ಇದನ್ನು ಈಡೇರಿಸುವ ನಿಟ್ಟಿನಲ್ಲಿ ಒಟ್ಟಾಗಿ ಶ್ರಮಿಸಬೇಕು ಎಂದರು.
ನೀರಾವರಿಯಲ್ಲಿ ಉನ್ನತ ಗುಣಮಟ್ಟದ ದಕ್ಷತೆಯನ್ನು ತರಲು ಪ್ರಯತ್ನ ಮಾಡಬೇಕು. ನೀರಾವರಿ ಯಲ್ಲಿ ಸಾಕಷ್ಟು ಜಲಮಾರ್ಗಗಳಲ್ಲಿ ನೀರು ದುರುಪಯೋಗವಾಗುತ್ತಿದೆ. ರಾಷ್ಟ್ರ ಮಟ್ಟದಲ್ಲಿ ನಮ್ಮ ಕಾಲುವೆಗಳ ಸಾಮರ್ಥ್ಯ ಶೇ 45 ರಷ್ಟಿದೆ. ಕಾಲುವೆಗಳಲ್ಲಿ ನೀರು ಹರಿಸುವ ಸಾಮರ್ಥ್ಯದಲ್ಲಿ ಶೇ. 55% ರಷ್ಟು ಅಂತರವಿದೆ. ಇವುಗಳನ್ನು ಸರಿಪಡಿಸಿದರೆ ಹೆಚ್ಚಿನ ನೀರು ಲಭ್ಯವಾಗಲಿದೆ ಎಂದರು.
ನೀರಿನ ಝರಿಗಳನ್ನು ಜೀವಂತವಾಗಿಡುವ ಜಲಾನಯನ ಯೋಜನೆಗಳು ಸೂಕ್ತವಾಗಿ ಯೋಜಿಸಲ್ಪಡದೆ, ನೀರಿನ ಹರಿವಿಗೆ ತಡೆಯೊಡ್ಡುತ್ತಿವೆ. ನೀರು ವ್ಯರ್ಥ ವಾಗಿ ಸಮುದ್ರ ಸೇರುತ್ತದೆ ಎನ್ನುತ್ತೇವೆ. ಆದರೆ ನಾವು ವಿಜ್ಞಾನ ವನ್ನು ಮರೆಯುತ್ತಿದ್ದೇವೆ. ಕನಿಷ್ಠ ಶೇ 30 ರಷ್ಟು ಸಿಹಿ ನೀರು ಸಮುದ್ರ ಸೇರಿದರೆ ಮಾತ್ರ ಶೇ 60 ರಷ್ಟು ಉಪ್ಪು ನೀರು ಆವಿಯಾಗಳು ಸಾಧ್ಯವಾಗಿ ಮಳೆಯಾಗುತ್ತದೆ. ಈ ಸರಳ ಸತ್ಯದ ಅರಿವು ಯೋಜನೆ ರೂಪಿಸುವ ಎಲ್ಲರಿಗೂ ಅರಿವಾಗಬೇಕು ಎಂದರು.