ಬೆಂಗಳೂರು.ಅ.01: ಸಿಎಂ ಯಡಿಯೂರಪ್ಪ ಅವರನ್ನು ಕೇಂದ್ರ ನಾಯಕರು ಟಾರ್ಗೆಟ್ ಮಾಡುತ್ತಿದ್ದಾರೆ. ಸಿಎಂ ಅವರನ್ನು ಟಾರ್ಗೆಟ್ ಮಾಡಲು ರಾಜ್ಯಕ್ಕೆ ನೆರೆ ಪರಿಹಾರ ಬಿಡುಗಡೆ ಮಾಡುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ ಕಾರಿದ್ದಾರೆ.
ಇಡೀ ಉತ್ತರ ಕರ್ನಾಟಕದ ಜನ ನೆರೆ ಪರಿಹಾರ ಸಿಗದೆ ಪರದಾಡುತ್ತಾ ಇದ್ದಾರೆ. ಈ ವೇಳೆ ಪ್ರಧಾನಿ ಮೋದಿಯವರು ಬಿಹಾರದ ನೆರೆ ಸಂತ್ರಸ್ತರ ಬಗ್ಗೆ ಟ್ವೀಟ್ ಮಾಡ್ತಾರೆ ಅಂದ್ರೆ ನಮ್ಮ ಜನ ಏನು ಮಾಡಿದ್ದಾರೆ?. ಜನರಿಗೆ ನಾವೇನು ಉತ್ತರ ಕೊಡಬೇಕು?. ಸಾಮಾಜಿಕ ಜಾಲತಾಣಗಳಲ್ಲಿ ಜನ ನಮ್ಮ ವಿರುದ್ಧ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಕೇಂದ್ರಕ್ಕೆ ನಮ್ಮ ಒಂದು ನಿಯೋಗ ಕೊಂಡೊಯಿರಿ. ನಾವು ಮಾತಾಡುತ್ತೇವೆ. ಹಿಂದೆ ನಾನೂ ಸಂಸದನಾಗಿದ್ದವನು. ನನಗೂ ಎಲ್ಲ ಅನುಭವ ಇದೆ. ನಮ್ಮ ಸಂಸದರು ಅದನ್ನು ಪ್ರಶ್ನೆ ಮಾಡಬೇಕು ಎಂದು ಕೇಂದ್ರ ನಾಯಕರ ವಿರುದ್ಧ ಹಾಗೂ ರಾಜ್ಯದ ಸಂಸದರ ವಿರುದ್ಧ ಯತ್ನಾಳ್ ನೇರ ವಾಗ್ದಾಳಿ ನಡೆಸಿದರು.
ಇದೇ ವೇಳೆ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧವೂ ಯತ್ನಾಳ್ ವಾಗ್ದಾಳಿ ನಡೆಸಿದರು. ಅಲ್ಲದೆ ಸಂಸದ ತೇಜಸ್ವಿ ಸೂರ್ಯನ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಎಸಿ ರೂಮಿನಲ್ಲಿ ಕೂತು ಪಕ್ಷ ಕಟ್ಟುವುದಲ್ಲ. ಹಳ್ಳಿ ಹಳ್ಳಿ ಅಲೆದು ಪಕ್ಷ ಕಟ್ಟಿರುವರು ನಾವು. ಇಂಗ್ಲಿಷ್ ಬಂದ ಮಾತ್ರಕ್ಕೆ ಅಂತಾರಾಷ್ಟ್ರೀಯ ನಾಯಕರಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.