ಕೇರಳ, ಡಿ 13: ಈಗಂತೂ ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಳ್ಳದೆ ವಿವಾಹವೇ ಇಲ್ಲವೆಂಬಂತಾಗಿದೆ. ವಿಭಿನ್ನ ಬಗೆಯ ಪ್ರಿ ವೆಡ್ಡಿಂಗ್ ಫೊಟೋಶೂಟ್ ಮಾಡಿಕೊಂಡು ಟ್ರೆಂಡ್ ಸೃಷ್ಟಿಸಬಯಸುವ ಜೋಡಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ..ಇವರ ಸಾಲಿಗೆ ಹೊಸ ಸೇರ್ಪಡೆಯೇ ಕೇರಳ ಮೂಲದ ಈ ಜೋಡಿ..
ಸಲಿಂಗ ಪ್ರೇಮಿಗಳಾದ ಅಬ್ದುಲ್ ರಹೀಂ ಮತ್ತು ನೆವಿದ್ ಆಂಟೋನಿ ಚುಲ್ಲಿಕಾಲ್ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿದ್ದು, ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
“ನವಜೋಡಿಗಳು ಮದುವೆಗೆ ಮುನ್ನ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಾರೆ. ಹಾಗೆಯೇ ನಾವೂ ಮಾಡಿಸಿದೆವು. ಪ್ರೀತಿ ಎಲ್ಲರಿಗೂ ಒಂದೇ. ಎಲ್ಲಕ್ಕಿಂತ ಹೆಚ್ಚಾಗಿ ಸಲಿಂಗಿಗಳ ಪ್ರೀತಿಯು ಎಲ್ಲರಂತೆ ಸಹಜ ಎಂಬ ಸಂದೇಶವನ್ನು ಸಾರುವ ಉದ್ದೇಶವೂ ಈ ಫೋಟೋಶೂಟ್ ಹಿಂದಿದೆ. ಪ್ರೀತಿಯಲ್ಲಿ ಯಾವುದನ್ನೂ ಕಳೆದುಕೊಳ್ಳಬಾರದು, ಏಕೆಂದರೆ ಅದರಲ್ಲಿ ಎಲ್ಲವೂ ಸುಂದರ” ಎಂಬ ಸಂದೇಶ ಹಾಕಿ ಫೋಟೋಗಳನ್ನು ಹಂಚಿಕೊಂಡಿದ್ದು, ಫೋಟೊಗಳಿಗೆ ನೆಟ್ಟಿಗರು ಶುಭ ಹಾರೈಸಿದ್ದಾರೆ.
ಐದು ವರ್ಷದಿಂದ ಪ್ರೀತಿಸುತ್ತಿರುವ ಈ ಜೋಡಿಗೆ ಸದ್ಯ ಕಂಕಣ ಬಲ ಕೂಡಿ ಬಂದಿದ್ದು, ಮನೆಯವರ ವಿರೋಧದದ ನಡುವೆಯೂ ವಿವಾಹಿತರಾಗುತ್ತಿದ್ದಾರಂತೆ.