ಬೆಂಗಳೂರು: ರೋಗ ಬಂದ ಬಳಿಕ ಚಿಕಿತ್ಸೆ ನೀಡುವ ಬದಲು, ರೋಗದ ಸಂಭವನೀಯತೆಯನ್ನು ಹೇಳುವ ತಪಾಸಣಾ ವ್ಯವಸ್ಥೆ ರಾಜ್ಯದಲ್ಲಿ ಬೆಳೆಯಬೇಕಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಡೆದ ‘ವಿಶ್ವ ಆರೋಗ್ಯ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಶ್ವಾಸಕೋಶ ಸೇರಿದಂತೆ ದೇಹದ ಎಲ್ಲ ಭಾಗಗಳು ಉತ್ತಮವಾಗಿ ಕೆಲಸ ಮಾಡಲು ಶುದ್ಧ ಆಮ್ಲಜನಕ, ಶುದ್ಧ ಆಹಾರ ಬೇಕು. ಆದರೆ ವಾಯು ಮಾಲಿನ್ಯದಿಂದಾಗಿ ಗಾಳಿ ಕಲುಷಿತವಾಗಿದೆ. ಕೂಲ್ ಡ್ರಿಂಕ್ಸ್, ಜಂಕ್ ಆಹಾರದಿಂದ ಬೊಜ್ಜು ಅತಿಯಾಗಿ ಹೃದಯ ಸಂಬಂಧಿ ಸಮಸ್ಯೆಗಳು, ಕ್ಯಾನ್ಸರ್, ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಹೆಚ್ಚಾಗಿವೆ. ಆದರೂ ರೋಗ ಬಂದ ಬಳಿಕ ಎಲ್ಲರೂ ಆಸ್ಪತ್ರೆಗೆ ಬರುತ್ತಿದ್ದಾರೆ. ಇದರ ಬದಲು, ರೋಗದ ಸಂಭವನೀಯತೆಯನ್ನು ಹೇಳುವ ವೈದ್ಯಕೀಯ ತಪಾಸಣೆ ನಮ್ಮಲ್ಲಿ ಬೆಳೆಯಬೇಕಿದೆ. ಆಧುನಿಕ ತಂತ್ರಜ್ಞಾನಗಳ ಬಳಕೆಯಿಂದ, ರೋಗ ಬರುವ ಮುನ್ನವೇ ಅದರ ಸಾಧ್ಯತೆಯನ್ನು ಹೇಳಲು ಸಾಧ್ಯವಿದೆ ಎಂದರು.
ಜಗತ್ತಿನಲ್ಲಿ ಅನೇಕ ವೃತ್ತಿಗಳಿವೆ. ಆದರೆ ವೈದ್ಯ ವೃತ್ತಿಯಲ್ಲಿ ಹೆಚ್ಚು ಧನ್ಯತಾ ಭಾವ ಮೂಡುತ್ತದೆ. ಅನುಕಂಪ, ಪ್ರೀತಿ, ವಿಶ್ವಾಸವನ್ನು ಅಳವಡಿಸಿಕೊಂಡಾಗ ಮಾತ್ರ ಇದು ಸಾಧ್ಯ. ರಾಜ್ಯದಲ್ಲಿ 44 ಸಾವಿರ ಆಶಾ ಕಾರ್ಯಕರ್ತೆಯರು ಗೌರವಧನಕ್ಕಿಂತ ಹತ್ತು ಪಟ್ಟು ಅಧಿಕ ಕೆಲಸ ಮಾಡುತ್ತಿದ್ದಾರೆ. ಅವರ ಗೌರವಧನ ಬಹಳ ಕಡಿಮೆ ಇದೆ ಎಂದು ಮುಖ್ಯಮಂತ್ರಿಗಳಿಗೆ ತಿಳಿಸಿದ್ದು, ಅದಕ್ಕೆ ಅವರು ಸ್ಪಂದಿಸಿ ಮೊತ್ತ ಹೆಚ್ಚಳ ಮಾಡಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ಎರಡು ವರ್ಷಗಳಲ್ಲಿ ಬಾಕಿ ಉಳಿದಿದ್ದ ಪದೋನ್ನತಿಯನ್ನು ಮಾಡಲಾಗಿದೆ. ನೌಕರರು, ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗಿದೆ ಎಂದರು.
ವೃತ್ತಿ ಬದುಕಿನಲ್ಲಿ ವೈದ್ಯರು ರಾಜಿ ಆಗಬಾರದು. ಜನರ ಮುಂದೆ ತಲೆ ತಗ್ಗಿಸುವಂತಾಗಬಾರದು. ಐಎಎಸ್, ಕೆಎಎಸ್ ಅಧಿಕಾರಿಗಳು ಎಲ್ಲ ಬಗೆಯ ಆಡಳಿತದ ಕೆಲಸವನ್ನು ಮಾಡುತ್ತಾರೆ. ಹಾಗೆಯೇ ವೈದ್ಯರು ಕೂಡ ಆಡಳಿತ ನಡೆಸಬೇಕು ಯಾವುದೇ ಆರೋಗ್ಯ ಸಂಸ್ಥೆ, ಆಸ್ಪತ್ರೆಯಲ್ಲಿ ಆಡಳಿತ ಲೋಪ ಉಂಟಾಗುವುದನ್ನು ತಡೆಯಲು ವೈದ್ಯರಿಗೆ ವಿಶೇಷ ತರಬೇತಿ ಅಗತ್ಯವಿದೆ. ಇದನ್ನು ಹಿಂದಿನ ಯಾವುದೇ ಸರ್ಕಾರ ಮಾಡಿರಲಿಲ್ಲ. ಈಗ ನಮ್ಮ ಸರ್ಕಾರ ಇದನ್ನು ಸೂಕ್ತವಾಗಿ ಮಾಡಲಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರಿ ನೌಕರರ ವೇತನಕ್ಕೆ ಸಮನಾಗಿ ರಾಜ್ಯ ನೌಕರರಿಗೆ ವೇತನ ನೀಡಬೇಕು ಎಂಬ ಬೇಡಿಕೆ ಇದೆ. ಈ ಬಗ್ಗೆ ಅಧ್ಯಯನ ನಡೆಸಲು ಸರ್ಕಾರ ಈಗಾಗಲೇ ಸಮಿತಿ ರಚಿಸಿದೆ. ಆರೋಗ್ಯ ಇಲಾಖೆಯ ನೌಕರರಿಗೆ ಈ ರೀತಿ ವೇತನ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು. ಇಲಾಖೆಯ ಖಾಲಿ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಲಾಗುವುದು. ಕಣ್ಣಿನ ಆರೋಗ್ಯ ತಪಾಸಣೆಗಾಗಿ ವಿಶೇಷ ಕಾರ್ಯಕ್ರಮ ನಡೆಸಲಾಗುತ್ತಿದೆ. ಬಡವರಿಗಾಗಿ ಉಚಿತ ಡಯಾಲಿಸಿಸ್ ಕಾರ್ಯಕ್ರಮವನ್ನು ವಿಸ್ತರಿಸಲಾಗಿದೆ ಎಂದರು.
44 ಸಾವಿರ ಆಶಾ ಕಾರ್ಯಕರ್ತೆಯರನ್ನು ಮಧ್ಯ ಕರ್ನಾಟಕ ಭಾಗದಲ್ಲಿ ಒಂದೆಡೆ ಸೇರಿಸಿ ಆರೋಗ್ಯ ದಿನಾಚರಣೆಯನ್ನು ಆಚರಿಸುವ ಉದ್ದೇಶವಿದೆ. ಇದಕ್ಕೆ ಕೇಂದ್ರ ಆರೋಗ್ಯ ಸಚಿವರನ್ನೂ ಕರೆತರಲಾಗುವುದು. ಹಾಗೆಯೇ ಅಂಗಾಂಗ ದಾನದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವ ಅಗತ್ಯವಿದೆ. ಪುನೀತ್ ರಾಜ್ ಕುಮಾರ್ ಅವರು ನೇತ್ರದಾನ ಮಾಡಿದ್ದರಿಂದ ಅರಿವು ಹೆಚ್ಚಾಗಿದೆ. ಇದೇ ರೀತಿ ತಾರೆಯರ ಮೂಲಕ ಹೆಚ್ಚು ಜಾಗೃತಿ ಮೂಡಿಸಬೇಕು ಎಂದರು.
ನ್ಯಾಯಾಲಯ ನೀಡುವ ತೀರ್ಪನ್ನು ಎಲ್ಲರೂ ಪಾಲಿಸಬೇಕು. ಕಾನೂನು ಎಲ್ಲರಿಗೂ ಒಂದೇ. ಎಲ್ಲಾ ನಾಗರಿಕರು ಕಾನೂನು ಪಾಲಿಸಬೇಕು. ಯಾವುದೇ ನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು. ಆದರೆ ಕೆಲ ವಿಚಾರದಲ್ಲಿ ರಾಜಕೀಯ ಮಾಡಲಾಗಿದೆ ಎಂದು ಸಚಿವರು ಹೇಳಿದರು.